ತಿರುಪತಿ: ರಾಜ್ಯ ರಾಜಧಾನಿಯಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಿಸುವ ಉದ್ದೇಶಕ್ಕಾಗಿ ಸೂಕ್ತ ಜಾಗ ನೀಡುವಂತೆ ತಿರುಮಲ ತಿರುಪತಿ ದೇವಸ್ಥಾನಗಳ (TTD) ಅಧ್ಯಕ್ಷ ಬಿ.ಆರ್. ನಾಯ್ಡು ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಸೂಚನೆ ಮೇರೆಗೆ ಪತ್ರ ಬರೆದಿರುವ ಬಿ.ಆರ್. ನಾಯ್ಡು, 'ಶ್ರೀವಾರಿ ದೇವಾಲಯ ನಿರ್ಮಾಣಕ್ಕಾಗಿ ರಾಜಧಾನಿಯ ಪ್ರಮುಖ ಪ್ರದೇಶದಲ್ಲಿ ಉಚಿತವಾಗಿ ಜಾಗ ನೀಡಬೇಕು' ಎಂದು ಕೋರಿದ್ದಾರೆ.
'ದೇವಾಲಯ ಎಂಬುದು ಕೇವಲ ಧಾರ್ಮಿಕ ಕೇಂದ್ರವಾಗಿರದೆ, ಸಮಾಜದ ಅಭಿವೃದ್ಧಿ ಮತ್ತು ಧಾರ್ಮಿಕ ಪ್ರವಾಸೋದ್ಯಮದಲ್ಲೂ ಪ್ರಮುಖ ಪಾತ್ರ ವಹಿಸಲಿದೆ' ಎಂದು ಟಿಟಿಡಿ ಅಧ್ಯಕ್ಷರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
'ಪ್ರತಿಯೊಬ್ಬರೂ ಇಂದು ಧಾರ್ಮಿಕತೆ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಪ್ರತಿ ರಾಜ್ಯದಲ್ಲೂ ವೆಂಕಟೇಶ್ವರ ದೇವಾಲಯ ಇರಬೇಕು. ದೇಶದ ಪ್ರಮುಖ ಸ್ಥಳಗಳಲ್ಲಿ ಶ್ರೀವಾರಿ ದೇವಾಲಯಗಳನ್ನು ಸ್ಥಾಪಿಸಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಬೇಕು' ಎಂದಿದ್ದಾರೆ.