ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಬಿಜೆಪಿ ಶಾಸಕರು, ಸದನದಲ್ಲೇ ಕಪ್ಪು ಬಾವುಟ ಹಾರಿಸಿದ್ದಾರೆ. ಹಾಗೆಯೇ, ಬಿಮನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸದನದಿಂದ ಹೊರನಡೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಮನ್, ಕೇಸರಿ ಪಕ್ಷದ ಸದಸ್ಯರನ್ನು ಹೊರಗಿಟ್ಟು ಕಲಾಪ ಮುಂದುವರಿಸುವ ಬಯಕೆ ತಮಗಿಲ್ಲ. ಆದರೆ, ಅವರು (ಬಿಜೆಪಿ ಶಾಶಕರು) ನಿಯಮಗಳನ್ನು ಧಿಕ್ಕರಿಸಿದ್ದಾರೆ ಎಂದು ದೂರಿದ್ದಾರೆ.
ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಪ್ಪು ಬಾವುಟ ಪ್ರದರ್ಶಿಸಿ, ಸ್ಪೀಕರ್ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದ ಬಿಜೆಪಿ ಶಾಸಕರು, ಸ್ಪೀಕರ್ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿಲ್ಲ. ಸದನದಲ್ಲಿ ಪ್ರಜಾಪ್ರಭುತ್ವವನ್ನು ತುಳಿದುಹಾಕಲಾಗಿದೆ ಎಂದು ಆರೋಪಿಸಿದರು.
ಗದ್ದಲದ ನಡುವೆಯೇ ಧನವಿನಿಯೋಗ ಮಸೂದೆ ಕುರಿತು ಚರ್ಚೆ ಆರಂಭಿಸಲಾಯಿತು. ಈ ವೇಳೆ ಬಿಜೆಪಿಯ ಕೆಲವು ಶಾಶಕರು ಸದನದ ಬಾವಿಗೆ ಇಳಿದು, ದಾಖಲೆಗಳನ್ನು ಹರಿದುಹಾಕಿ ಪ್ರತಿಭಟಿಸಿದರು.
ಸುಮಾರು 35 ನಿಮಿಷ ಪ್ರತಿಭಟಿಸಿದ ನಂತರ ಸದನದಿಂದ ಹೊರನಡೆದರು. ಬಳಿಕ, ಬಿಜೆಪಿ ಶಾಸಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು, ವಿಧಾನಸಭೆ ಆವರಣದಲ್ಲಿ ಸ್ಪೀಕರ್ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಮಾತನಾಡಿರುವ ಬಿಮನ್, 'ನನ್ನ ರಾಜೀನಾಮೆಗೆ ಒತ್ತಾಯಿಸುವ ರೀತಿ ಇದಲ್ಲ' ಎಂದಿದ್ದಾರೆ.