ನವದೆಹಲಿ: ದೇಶದ 83 ವಿಭಿನ್ನ ಗುಂಪುಗಳಿಗೆ ಸೇರಿದ ಹಾಗೂ ಆರೋಗ್ಯವಂತರಾದ 10 ಸಾವಿರ ಜನರ ಜಿನೋಮ್ ಡೇಟಾಬೇಸ್ (ವರ್ಣತಂತುಗಳ ಸಂರಚನೆಯ ದತ್ತಾಂಶ) ಸ್ಥಾಪಿಸಿದ್ದಾಗಿ ಭಾರತೀಯ ಜೀವವಿಜ್ಞಾನಿಗಳು ಮಂಗಳವಾರ ಘೋಷಿಸಿದ್ದಾರೆ.
ಜಿನೋಮ್ ದತ್ತಾಂಶ ಒಳಗೊಂಡ ಈ ವಿಶಿಷ್ಟ ವೇದಿಕೆಯು, ಭವಿಷ್ಯದಲ್ಲಿ 'ನಿಖರ ಔಷಧಿ' ಅಭಿವೃದ್ಧಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಜೀವವಿಜ್ಞಾನಿಗಳು ಹೇಳಿದ್ದಾರೆ.
'ಜಿನೋಮ್ ಇಂಡಿಯಾ ಪ್ರಾಜೆಕ್ಟ್'ನಡಿ ಐದು ವರ್ಷಗಳ ಸಂಶೋಧನೆ ಫಲವಾಗಿ ಈ ದತ್ತಾಂಶ ಸಿದ್ಧಪಡಿಸಲಾಗಿದೆ. ಈ ಉದ್ದೇಶಕ್ಕಾಗಿ ಬೆಂಗಳೂರಿನ ಐಐಎಸ್‌ಸಿ, ನಿಮ್ಹಾನ್ಸ್ ಹಾಗೂ ಸೆಂಟರ್ ಫಾರ್ ಬಯೊಲಾಜಿಕಲ್ ಸೈನ್ಸಸ್ ಸೇರಿ ದೇಶದ 20 ಪ್ರತಿಷ್ಠಿತ ಸಂಸ್ಥೆಗಳನ್ನು ಒಳಗೊಂಡ ಒಕ್ಕೂಟ ಸ್ಥಾಪಿಸಲಾಗಿದೆ.
'ಜಿನೋಮ್ ಇಂಡಿಯಾ ಪ್ರಾಜೆಕ್ಟ್‌ನ ಭಾಗವಾಗಿ ಕೈಗೊಂಡ ಸಂಶೋಧನೆಯಿಂದ ಭಾರತೀಯರ ಡಿಎನ್‌ಎಯಲ್ಲಿ 18 ಕೋಟಿ ವಿಶಿಷ್ಟ ವ್ಯತ್ಯಾಸಗಳಿರುವುದು ಪತ್ತೆಯಾಗಿದೆ. ಈ ಪೈಕಿ ಶೇ 60ರಷ್ಟು ವ್ಯತ್ಯಾಸಗಳು ಅಪರೂಪ ಎಂದೇ ಪರಿಗಣಿಸಲಾಗುತ್ತದೆ' ಎಂದು ಬಯೊಟೆಕ್ನಾಲಜಿ ಇಲಾಖೆ ಕಾರ್ಯದರ್ಶಿ ರಾಜೇಶ್ ಗೋಖಲೆ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ. ರಾಜೇಶ್ ಗೋಖಲೆ ಅವರು ಈ ಪ್ರಾಜೆಕ್ಟ್‌ನ ಮುಂದಾಳತ್ವ ವಹಿಸಿದ್ದರು.
'ದೇಶದ ಆರೋಗ್ಯವಂತ ಭಾರತೀಯರ ವಂಶವಾಹಿಯಲ್ಲಿನ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳಲು ಹಾಗೂ ರೋಗಗಳಿಗೆ ಕಾರಣವಾಗುವ ವಂಶವಾಹಿಯಲ್ಲಿನ ವ್ಯತ್ಯಾಸಗಳ ಮೌಲ್ಯಮಾಪನಕ್ಕೆ ಈ ಪ್ರಾಜೆಕ್ಟ್ ಆಧಾರ ಒದಗಿಸುತ್ತದೆ' ಎಂದು ಗೋಖಲೆ ಹೇಳಿದ್ದಾರೆ.
ಪ್ರಮುಖ ಅಂಶಗಳು
* ವ್ಯಕ್ತಿಯ ಚಿಕಿತ್ಸೆಗೆ ಅಗತ್ಯವಿರುವ ನಿರ್ದಿಷ್ಟ ಔಷಧಿ ಅಭಿವೃದ್ಧಿಗೆ ದತ್ತಾಂಶದಿಂದ ಅನುಕೂಲ
* ನಿರ್ದಿಷ್ಟ ಜನರ ಗುಂಪುಗಳಲ್ಲಿ ಕಂಡುಬರುವ ಕಾಯಿಲೆಗಳಿಗೆ ಔಷಧಿಗಳ ಅಭಿವೃದ್ಧಿ
* 83 ಜನಾಂಗೀಯ ಗುಂಪುಗಳಿಗೆ ಸೇರಿದ 20 ಸಾವಿರ ಜನರ ರಕ್ತದ ಮಾದರಿ ಸಂಗ್ರಹಿಸಿ ಜಿನೋಮ್ ಸಿಕ್ವೆನ್ಸಿಂಗ್‌ಗೆ ಒಳಪಡಿಸಲಾಗಿತ್ತು
* ಅಂತಿಮವಾಗಿ 4696 ಪುರುಷರು ಹಾಗೂ 5076 ಮಹಿಳೆಯರ ಜಿನೋಮ್ ಸಿಕ್ವೆನ್ಸಿಂಗ್ ಫಲಿತಾಂಶ ಒಳಗೊಂಡ ದತ್ತಾಂಶ ಸಿದ್ಧಪಡಿಸಲಾಗಿದೆ