ಮುಂಬ್ಯೆ:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಗತ್ತಿನಾದ್ಯಂತ ಹೊಸ ಸುಂಕ ವಿಧಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆ ರಾತ್ರೋರಾತ್ರಿ ದಿಢೀರ್ ಕುಸಿತ ಕಂಡಿದ್ದು, ಕೇವಲ 10 ಸೆಕೆಂಡ್ ಅಲ್ಲಿ ಭಾರತೀಯ ಷೇರು ಹೂಡಿಕೆದಾರರು ಬರೋಬ್ಬರಿ 1.93 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಶೇ.26 ರಷ್ಟು ಸುಂಕವನ್ನು ವಿಧಿಸಿದ್ದರಿಂದ, ಷೇರು ವಹಿವಾಟಿನಲ್ಲಿ ಕೇವಲ 10 ಸೆಕೆಂಡ್ ನಲ್ಲಿ 1.93 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ವರದಿಯ ಪ್ರಕಾರ, ಹೂಡಿಕೆದಾರರ ಸಂಪತ್ತು ಬುಧವಾರ 4,12,98,095 ಕೋಟಿ ರೂ.ಗಳಿಂದ 1,93,170 ಕೋಟಿ ರೂ.ಗಳಷ್ಟು ಕುಸಿದು 4,11,04,925 ಕೋಟಿ ರೂ.ಗಳಿಗೆ ತಲುಪಿದೆ
ಇನ್ನು ಪರಸ್ಪರ ಸುಂಕ ವಿಧಿಸಿದ್ದರಿಂದ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಉಂಟಾಗಿದ್ದು, ಬೆಳಿಗ್ಗೆ 9:31 ರ ವೇಳೆಗೆ ಬಿಎಸ್‌ಇ ಸೆನ್ಸೆಕ್ಸ್ 344.27 ಪಾಯಿಂಟ್ಸ್ ಕುಸಿದು 76,273.17 ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 50 80.60 ಪಾಯಿಂಟ್ಸ್ ಕಳೆದುಕೊಂಡು 23,251.75 ಕ್ಕೆ ತಲುಪಿದೆ.