ಬದಿಯಡ್ಕ: ಇತಿಹಾಸ ಪ್ರಸಿದ್ದ ಶ್ರೀ ಕ್ಷೇತ್ರ ಪೆರಡಾಲದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಮತ್ತು ಸೇವಾ ಸಮಿತಿಯ ಆಶ್ರಯದಲ್ಲಿ ಮೇ.1 ರಂದು ಲೋಕಕಲ್ಯಾಣರ್ಥವಾಗಿ ಬೆಳಗ್ಗೆ ಗಣಪತಿ ಹವನ, ಏಕಾದಶ ರುದ್ರಾಭಿಷೇಕ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಬಲಿವಾಡು ಕೂಟ ಸಾಮೂಹಿಕ ಪ್ರಾರ್ಥನೆ, ಬಳಿಕ ಧಾರ್ಮಿಕ ಸಭೆ ಶಿವಶಕ್ತಿ ಆಯೋಜಿಸುವ ಶಿವಾರ್ಪಣಂ ನಿಧಿ ಕೂಪನ್ ಬಿಡುಗಡೆ ಸಮಾರಂಭ ನಡೆಯಲಿದೆ.
ಸಂಜೆ ದುರ್ಗಾ ಪೂಜೆ, ರಾತ್ರಿ ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಧಾರ್ಮಿಕ ಸಭೆಯಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಆಶೀರ್ವಚನ ನೀಡುವರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸುವರು.. ಹುಡ್ಕೋದ ಮಾಜಿ ಸಲಹೆಗಾರ ರವೀಂದ್ರ ಆಳ್ವ ಕೋಟೆಕುಂಜ ಕಂಬಾರು ಸಭಾ ಕಾರ್ಯಕ್ರಮ ಉದ್ಘಾಟಿಸುವರು.
ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ಶಿವಾರ್ಪಣಂ ನಿಧಿ ಕೂಪನ್ ಬಿಡುಗಡೆಗೊಳಿಸುವರು. ವಿವಿಧ ವಲಯದ ಗಣ್ಯರು ಉಪಸ್ಥಿತರಿರುವರು.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸೋಮವಾರ ಶ್ರೀ ಕ್ಷೇತ್ರದಲ್ಲಿ ಜರಗಿತು. ಶ್ರೀ ಕ್ಷೇತ್ರ ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ಗೋಪಾಲಕೃಷ್ಣ ಪೈ ಬದಿಯಡ್ಕ ಮತ್ತು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಜಂಟಿಯಾಗಿ ಬಿಡುಗಡೆಗೊಳಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪಿಜಿ.ಜಗನ್ನಾಥ ರೈ, ಟ್ರಸ್ಟಿ ಸೀತಾರಾಮ ನವಕಾನ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಮಾಜಿ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ಯುವ ಸಮಿತಿ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಜನಪ್ರತಿನಿಧಿ ರವಿಕುಮಾರ ರೈ ಪೆರಡಾಲ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳಾದ ಉದಯಶಂಕರ್ ಪಿ.ಎಸ್, ಜಗನ್ನಾಥ ರೈ ಕೊರೆಕ್ಕಾನ, ಮಾತೃ ಸಮಿತಿಯ ವಿನಯ ಜೆ.ರೈ, ಗೀತಾ ಭಟ್, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಅರ್ಚಕ ವೃಂದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.