ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,700 ದಾಟಿದೆ.
ರಾಜಧಾನಿಯಲ್ಲಿ ಧರೆಗುರುಳಿದ್ದ ಕಟ್ಟಡದ ಅವಶೇಷಗಳಡಿ 91 ಗಂಟೆಗಳಿಂದ ಸಿಲುಕಿದ್ದ 63 ವರ್ಷದ ಮಹಿಳೆಯನ್ನು ರಕ್ಷಣಾ ಸಿಬ್ಬಂದಿ ಮಂಗಳವಾರ ರಕ್ಷಣೆ ಮಾಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಮ್ಯಾನ್ಮಾರ್ ಸೇನಾ ಸರ್ಕಾರದ ಹಿರಿಯ ಜನರಲ್ ಮಿನ್ ಆಂಗ್ ಹ್ಲೇಂಗ್ ಮಾತನಾಡಿ, 'ಭೂಕಂಪದಲ್ಲಿ ಈವರೆಗೆ 2,719 ಮಂದಿ ಮೃತಪಟ್ಟಿದ್ದಾರೆ. 4,521 ಮಂದಿ ಗಾಯಗೊಂಡಿದ್ದು, 441 ಮಂದಿ ನಾಪತ್ತೆಯಾಗಿದ್ದಾರೆ' ಎಂದು ಹೇಳಿದ್ದಾರೆ.
ಭೂಕಂಪದಿಂದ ದೇಶದ ಬಹುತೇಕ ಕಡೆಗಳಲ್ಲಿ ವಿದ್ಯುತ್, ಟೆಲಿಫೋನ್ ಅಥವಾ ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ. ರಸ್ತೆಗಳು, ಮೇಲ್ಸೇತುವೆಗಳು ಹಾನಿಗೀಡಾಗಿದ್ದು, ಯಾವ ಪ್ರದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ.
ಈಗ ಲಭ್ಯವಾಗುತ್ತಿರುವ ವರದಿಗಳು ಬಹುತೇಕ ಮ್ಯಾನ್ಮಾರ್‌ನ ಎರಡನೇ ದೊಡ್ಡ ನಗರ ಮಾಂಡಲೆಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ.