ಮಧೂರು : ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶತಮಾನದ ಮೊದಲ ಮೂಡಪ್ಪ ಸೇವೆ ಏ. 5ರಂದು ಜರುಗಲಿದೆ. ಕಳೆದ ಹದಿನಾಲ್ಕು ವರ್ಷಗಳಿಂದ ನವೀಕರಣ ಜೀರ್ಣೋದ್ಧಾರ ಪ್ರಕ್ರಿಯೆ ಪೂರ್ತಿಗೊಂಡು ಏ. 27ರಂದು ಪುನ:ಪ್ರತಿಷ್ಠಾ ಬ್ರಹ್ಮಕಲಶ-ಮೂಡಪ್ಪ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ದೊರತಿದ್ದು, ಕುಂಬಳೆ ಸೀಮೆಯ ಅತೀದೊಡ್ಡ ಸಂಭ್ರಮವಾಗಿ ಮೂಡಪ್ಪ ಸೇವೆಗೆ ಮಧೂರು ದಏಗುಲ ಅಣಿಯಾಗಿದೆ. ಮಹಾ ಉತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾದಿಗಳು ಮಧೂರಿಗೆ ಬಂದು ಸೇರಲಿದ್ದಾರೆ.
ಮೂಡಪ್ಪ ಸೇವೆಗಾಗಿ ಮಧೂರು ಸಜ್ಜುಗೊಂಡಿದ್ದು, ಮೂಡಪ್ಪ ಸೇವೆಗಾಗಿ ಅಕ್ಕಿ ಮುಹೂರ್ತ ಶುಕ್ರವಾರ ದೇಗುಲದಲ್ಲಿ ನೆರವೇರಿತು. ಬೆಳಗ್ಗೆ ದೀಪದ ಬಲಿ, ಶತರುದ್ರಾಭಿಷೇಕ, 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನೆರವೇರಿತು. ಪಾರಂಪರಿಕ ಒನಕೆ ಹಾಗೂ ಬೀಸುವ ಕಲ್ಲಿನ ಮೂಲಕ ಅಕ್ಕಿ ಹುಡಿಮಾಡುವ ಪ್ರಕ್ರಿಯೆ ನಡೆಯಲಿದ್ದು, ಶ್ರೀದೇವರ ನಡೆಯಲ್ಲಿ ಅರೆಯುವಕಲ್ಲು ಒನಕೆ ಹಾಗೂ ಬೀಸುವ ಕಲ್ಲಿಗೆ ಪೂಜೆ ನಡೆಸಲಾಯಿತು.
ಶ್ರೀಮಹಾಗಣಪತಿಯನ್ನು ಅಪ್ಪದಿಂದ ಮುಚ್ಚುವ ಅತಿ ವಿಶಿಷ್ಟ ಹಾಗೂ ಪ್ರಧಾನ ಸೇವೆಯಾಗಿದೆ ಮೂಡಪ್ಪ ಸೇವೆ. ಗಣಪತಿ ವಿಗ್ರಹದ ಸುತ್ತು ಸುಮಾರು ಆರುವರೆ ಅಡಿ ಎತ್ತರದಲ್ಲಿ ಕಬ್ಬಿನಿಂದ ಬೇಲಿತಯಾರಿಸಿ, ಇದರೊಳಗೆ ಅಷ್ಟ ದ್ರವ್ಯಗಳ ಸಹಿತ 144ಸೇರು ಅಕ್ಕಿಯಿಂದ ಅಪ್ಪ ಹಾಗೂ 111ಸೇರು ಅಕ್ಕಿಯಿಂದ ತಯಾರಿಸಿದ ಪಚ್ಚಪ್ಪ ತಯಾರಿಸಿ ಶ್ರೀಮಹಾಗಣಪತಿಯ ಕತ್ತಿನ ಭಾಗದ ವರೆಗೆ ತುಂಬಲಾಗುವುದು. ಇದೇ ಸಂದರ್ಭ ಶ್ರೀ ಮದನಂತೇಶ್ವರ ದೇವರಿಗೆ ಮೂರು ಮುಡಿ ಅಕ್ಕಿಯಿಂದ ತಯಾರಿಸಿದ ಅಪ್ಪ ಹಾಗೂ ಒಂದು ಮುಡಿ ಅಕ್ಕಿಯ ನೈವೇದ್ಯ ಸಮರ್ಪಿಸಲಾಗುವುದು.
ಅರಿಕೊಟ್ಟಿಗೆ ಮುಹೂರ್ತ:
ಎ.5ರಂದು ಬೆಳಿಗ್ಗೆ 5ಕ್ಕೆ ಶ್ರೀದೇವರ ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನಡೆಯುವುದು. ನಂತರ ಮೂಡಪ್ಪ ತಯಾರಿಯ ಅರಿಕೊಟ್ಟಿಗೆಯ ಮುಹೂರ್ತ ನಡೆಯಲಿದೆ. ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಬೆಳಗಿನಜಾವ ಶ್ರೀದೇವರಿಗೆ ಕಲಶಾಬಿಷೇಕ ನಡೆಸಿ, ಅರಿಕೊಟ್ಟಿಗೆ ಪ್ರವೇಶಿಸಿ ದ್ವಿಜರಿಗೆ ಮುಹೂರ್ತ ದಾನ ದಕ್ಷಿಣೆ ಕೊಟ್ಟು, ಸರ್ವಾಪ್ಪಣೆ ಪಡೆದು ಅಪ್ಪ ತಯಾರಿಗೆ ನಾಂದಿ ಹಾಡುವರು. ಹೊಸ ಕಾವಲಿಯಲ್ಲಿ ಆಚಾರ್ಯ ತಂತ್ರಿಗಳೇ ಮೊದಲ ಅಪ್ಪ ಹೊಯ್ದು ಬಳಿಕ ಅಪ್ಪ ತಯಾರಿಗೆ ನಿಯುಕ್ತರಾದವರಿಗೆ ಅಪ್ಪ ತಯಾರಿ ಮೇಲ್ನೋಟದ ಉಸ್ತುವಾರಿ ಅಧಿಕಾರ ಹಸ್ತಾಂತರಿಸುವರು. ಈ ಬಾರಿ ಮಧೂರಿನ ದೇವ ನರ್ತಕ ಧನಂಜಯ ಅವರಿಗೆ ಮೂಡಪ್ಪ ಅಪ್ಪಸೇವಾ ನಿರ್ಮಾಣ ಜವಬ್ದಾರಿ ವಹಿಸಲಾಗಿದೆ.
ಏ. 5ರಂದು ಸಂಜೆ 5ಕ್ಕೆ ಮಧೂರಿನಲ್ಲಿ ಉತ್ಸವ ಬಲಿ ನಡೆದು ಬಳಿಕ ದೇವರು ಮೂಲಸ್ಥಾನಕ್ಕೆ ಸವಾರಿ ಹೊರಡುವರು. ರಾತ್ರಿ ಮೂಲಸ್ಥಾನದ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ ನಡೆದು, ದೇವರು ಕ್ಷೇತ್ರಕ್ಕೆ ನಿರ್ಗಮಿಸುವ ಘೋಷಯಾತ್ರೆ ನಡೆಯಲಿದ್ದು,ನಂತರ ದೇವಳದಲ್ಲಿ ಶ್ರೀ ಭೂತಬಲಿ ನಡೆದು ಮಹಾಮೂಡಪ್ಪಾಧಿವಾಸ ಹೋಮ ಜರಗಲಿದೆ. ರಾತ್ರಿ ಈ ಶತಮಾನದ ಮೊದಲ ಮಹಾಮೂಡಪ್ಪ ಸೇವೆ ಶ್ರೀಮಹಾಗಣಪತಿ ದೇವರಿಗೆ ಸಮರ್ಪಣೆಯಾಗಲಿದೆ.
ಅಪ್ಪ ತಯಾರಿ ನೇತೃತ್ವ.....;
ಕೇರಳ, ಕರ್ನಾಟಕದ ಪ್ರಶಸ್ತಿ ವಿಜೇತ ದೇವನರ್ತಕ, ಮಧೂರು ಕ್ಷೇತ್ರ ಸಿಬಂದಿಯೂ ಆಗಿರುವ ಧನಂಜಯ ಅವರು ಈ ಬಾರಿಯ ಮೂಡಪ್ಪ ಸೇವೆಯ ಅಪ್ಪ ತಯಾರಿಯ ನೇತೃತ್ವ ವಹಿಸಿದ್ದಾರೆ. ಇವರು ಮಧೂರಿನ ಪಡು ಕಕ್ಕೆಪ್ಪಾಡಿ ಮನೆಯವರು.
ಈ ಹಿಂದೆ 1962ರಲ್ಲಿ ಮಧೂರಿನಲ್ಲಿ ನಡೆದ ಮೂಡಪ್ಪ ಸೇವೆ ಮತ್ತು 1992ರ ಮೂಡಪ್ಪ ಸೇವೆಯಲ್ಲಿ ಆ ಕಾಲದ ಪ್ರಸಿದ್ಧ ದೇವನರ್ತಕರಾಗಿದ್ದ ಪಡುಕಕ್ಕೆಪ್ಪಾಡಿ ರಾಮಕೃಷ್ಣ ಭಟ್ಟ ಅವರ ಪುತ್ರ. 1992ರಲ್ಲಿ ತಂದೆ ಜತೆ ಧನಂಜಯ ಅವರೂ ಸಹಾಯಕರಾಗಿ ಅಪ್ಪ ನಿರ್ಮಾಣದಲ್ಲಿ ಕೈ ಜೋಡಿಸಿದ್ದರು.
ಬಳಿಕ 2008ರಲ್ಲಿ ಪಡುಕಕ್ಕೆಪ್ಪಾಡಿ ರಾಮಕೃಷ್ಣ ಭಟ್ಟರ ಅಗಲುವಿಕೆಯೊಂದಿಗೆ ಮಧೂರಿನ ವಿಶೇಷ ಅಪ್ಪ ತಯಾರಿಯ ಹೊಣೆಗಾರಿಕೆ ಧನಂಜಯ ಅವರ ಹೆಗಲೇರಿತ್ತು. ಮಧೂರು ಕ್ಷೇತ್ರದಲ್ಲಿ ಸೇವೆಯ ಜತೆಗೆ ಅತ್ಯುತ್ತರ ಕೇರಳದ ಅತ್ಯಂತ ವಿಶಿಷ್ಟವಾದ ತಿಡಂಬು ನೃತ್ಯದಲ್ಲೂ ಧನಂಜಯ ಅವರು ಪ್ರಾವೀಣ್ಯತೆ ಪಡೆದಿದ್ದಾರೆ.
PHOTOS: ಅಪ್ಪಕ್ಕಾಗಿ ಅಕ್ಕಿ ಹುಡಿ ತಯಾರಿಸಲಿರುವ ಅರೆಯುವಕಲ್ಲು, ಬೀಸುವ ಕಲ್ಲು ಹಾಗೂ ಒನಕೆಗೆ ಪೂಜೆ.
: ಅಕ್ಕಿ ಶುಚಿಗೊಳಿಸುತ್ತಿರುವ ಮಹಿಳೆಯರು.