ನವದೆಹಲಿ: ಉರ್ದು ಕವಿತೆಗಳನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಕಳೆದ ಆರು ದಶಕಗಳಿಂದ ನಡೆಯುತ್ತಿರುವ 'ಶಂಕರ್ ಶಾದ್ ಮುಷೈರಾ'ದಲ್ಲಿ ಚಿತ್ರ ಸಾಹಿತಿ ಜಾವೇದ್ ಅಖ್ತರ್, ಉರ್ದು ಕವಿ ವಸೀಮ್ ಬರೇಲ್ವಿ, ಹಾಸ್ಯ ಸಾಹಿತಿ ಮೀರುತಿ ಸೇರಿದಂತೆ ಹಲವು ಖ್ಯಾತನಾಮರು ಪಾಲ್ಗೊಳ್ಳುತ್ತಿದ್ದಾರೆ.
ರಾಷ್ಟ್ರರಾಜಧಾನಿ ನವದೆಹಲಿಯ ಬಾರಾಕಂಭ ರಸ್ತೆಯಲ್ಲಿರುವ ಮಾಡರ್ನ್ ಶಾಲೆಯಲ್ಲಿ ಏ. 5ರಿಂದ ವಾರ್ಷಿಕ ಮುಷೈರಾ ಆಯೋಜನೆಗೊಂಡಿದೆ. ದೆಹಲಿಯ ಸಾಮಾಜಿಕ, ಶೈಕ್ಷಣಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ ಶಂಕರ್ ಲಲ್ಲಾ ಮತ್ತು ಲಾಲಾ ಮುರಳಿಧರ್ ಅವರು ಉರ್ದು ಸಾಹಿತ್ಯಕ್ಕೂ ಹೆಚ್ಚಿನ ಕೊಡುಗೆ ನೀಡಿದವರು. ಇವರನ್ನು ಸ್ಮರಿಸುವ ಕಾರ್ಯಕ್ರಮವೇ 'ಶಂಕರ್ ಶಾದ್ ಮುಷೈರಾ' ಕಾರ್ಯಕ್ರಮವಾಗಿದೆ.
'ದೆಹಲಿಯ ಕೆಲ ಆಸ್ಥಾನಗಳಲ್ಲಿ, ಹಲವು ಕವಿಗಳು ಮತ್ತು ಜನರು ಕಳೆದ ಹಲವು ಶತಮಾನಗಳಿಂದ ಉರ್ದು ಬಳಸುತ್ತಿದ್ದಾರೆ. ದೆಹಲಿಯಲ್ಲಿ ಈಗಲೂ ವ್ಯಾಪಕವಾಗಿ ಬಳಕೆಯಲ್ಲಿರುವ ಉರ್ದು ಸಾಹಿತ್ಯ ಆಧಾರಿತ ಈ ಮುಷೈರಾ ಕಳೆದ ಆರು ದಶಕಗಳಿಂದ ಆಯೋಜನೆಗೊಳ್ಳುತ್ತಿದೆ. ಇದರಲ್ಲಿ ಉರ್ದು ಸಾಹಿತ್ಯದ ಹೆಸರಾಂತ ಕವಿಗಳು, ಹೊಸ ತಲೆಮಾರಿನವರು ಪಾಲ್ಗೊಳ್ಳುತ್ತಿದ್ದಾರೆ' ಎಂದು ಶಂಕರ್ ಲಾಲ್ ಮುರಳೀಧರ್ ಸೊಸೈಟಿ ಅಧ್ಯಕ್ಷ ಮಾಧವ ಬನ್ಸೀಧರ್ ಶ್ರೀರಾಮ್ ತಿಳಿಸಿದರು.
'ಈ ಮುಷೈರಾ ಮೂಲಕ ಉರ್ದು ಸಾಹಿತ್ಯ ಪರಂಪರೆಯನ್ನು ಉಳಿಸಲು ಹಾಗೂ ಮುಂದಿನ ಪೀಳಿಗೆಗೆ ಇದನ್ನು ಕಾಪಾಡುವ ದೃಷ್ಟಿಯಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ' ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಝರ್ ಇಕ್ಬಾಲ್, ನೊಮಾನ್ ಶೇಖ್, ಗುಹರ್ ರಾಝಾ, ಶಬೀನಾ ಅದೀಪ್, ಖುಷ್ಬೀರ್ ಸಿಂಗ್ ಶಾದ್ ಸೇರಿದಂತೆ ಹಲವು ಪಾಲ್ಗೊಳ್ಳುತ್ತಿದ್ದಾರೆ.
1954ರಲ್ಲಿ ಪ್ರಾರಂಭವಾದ ಈ ವಾರ್ಷಿಕ ಮುಷೈರಾ ಕಾರ್ಯಕ್ರಮದಲ್ಲಿ ದೇಶದ ಹೆಸರಾಂತ ಕವಿಗಳನ್ನು ಆಹ್ವಾನಿಸುತ್ತಾ ಬರಲಾಗುತ್ತಿದೆ. ಪಾಕಿಸ್ತಾನವನ್ನೂ ಒಳಗೊಂಡು ವಿದೇಶಗಳ ಉರ್ದು ಸಾಹಿತಿಗಳೂ ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಕಳೆದ ಕೆಲ ದಶಕಗಳಿಂದ ಇದು ಜಾಗತಿಕ ರಾಜಕೀಯ ಸುಳಿಗೆ ಸಿಲುಕಿದೆ.