ಅಪ್ರಾಪ್ತ ಬಳೆಕೆದಾರರು ಉದ್ದೇಶಪೂರ್ವಕವಾಗಿ ತಮ್ಮ ಸುಳ್ಳು ಜನ್ಮದಿನಾಂಕವನ್ನು ದಾಖಲಿಸಿ 'ವಯಸ್ಕ' ಎಂದು ಬಿಂಬಿಸಿಕೊಂಡದ್ದು ಕಂಡುಬಂದಲ್ಲಿ, ಅದನ್ನು ಎಐ ಮೂಲಕ ಪತ್ತೆ ಮಾಡಲಾಗುವುದು ಎಂದು ಇನ್ಸ್‌ಟಾಗ್ರಾಂನ ಮಾತೃಸಂಸ್ಥೆ ಮೆಟಾ ತಿಳಿಸಿದೆ. ಆದರೆ ಇದನ್ನು ಯಾವ ಆಧಾರದಲ್ಲಿ ಪತ್ತೆ ಮಾಡಲಾಗುವುದು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಟೀನ್ ಖಾತೆ ಮೇಲಿನ ನಿರ್ಬಂಧಗಳು
ಖಾತೆಯು ಹದಿಹರೆಯದವರಿಗೆ ಸೇರಿದ್ದು ಎಂದು ಕಂಡುಬಂದಲ್ಲಿ, ಅದನ್ನು ಸ್ವಯಂಚಾಲಿತವಾಗಿ 'ಖಾಸಗಿ' ಖಾತೆಯನ್ನಾಗಿ ಪರಿವರ್ತಿಸಲಾಗುವುದು. ಅಂತೆಯೇ, ಪರಸ್ಪರ ಹಿಂಬಾಲಿಸುವವರು ಮಾತ್ರ ಸಂದೇಶ ಕಳಿಸಲು ಅನುಮತಿಸಲಾಗುವುದು. ಕ್ರೌರ್ಯ, ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ವಿಷಯಗಳು ಆ ಖಾತೆಯನ್ನು ತಲುಪದಂತೆ ತಡೆಹಿಡಿಯಲಾಗುತ್ತದೆ. ದಿನದಲ್ಲಿ 60 ನಿಮಿಷಗಳಿಗಿಂತ ಅಧಿಕ ಕಾಲ ಟೀನ್ ಖಾತೆಗಳು ಸಕ್ರಿಯವಾಗಿದ್ದಲ್ಲಿ, ನೋಟಿಫಿಕೇಷನ್‌ಗಳ ಮೂಲಕ ಎಚ್ಚರಿಸಲಾಗುವುದು. ಅಂತೆಯೇ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 7ರ ವರೆಗೆ ಸ್ಲೀಪ್ ಮೋಡ್‌ನಲ್ಲಿರಲಿದ್ದು, ಈ ವೇಳೆ ಸಂದೇಶಗಳಿಗೆ ಸ್ವಯಂಚಾಲಿತ ಪ್ರತಿಕ್ರಿಯೆಗಳನ್ನು ರವಾನಿಸಲಾಗುತ್ತದೆ.
ಪೋಸ್ಟ್ ಲೈಕ್ ಮಾಡಿದರೆ ಅಪರಾಧವಲ್ಲ: ಹೈಕೋರ್ಟ್
ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಪೋಸ್ಟ್‌ಗೆ ಲೈಕ್ (ಮೆಚ್ಚುಗೆ) ಕೊಟ್ಟಲ್ಲಿ, ಅದು ಆ ಪೋಸ್ಟ್ ಅನ್ನು ಪ್ರಕಟಿಸಿದಂತೆ ಆಗುವುದಿಲ್ಲ ಹಾಗೂ ಅಶ್ಲೀಲ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ನೀಡಲಾಗುವ ಶಿಕ್ಷೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಫೇಸ್ಬುಕ್ ಪೋಸ್ಟ್ ಒಂದಕ್ಕೆ ಲೈಕ್ ನೀಡಿದ ಕಾರಣ ಇಮ್ರಾನ್ ಖಾನ್ ಎಂಬಾತ ಆರೋಪಿಯಾಗಿರುವ ಪ್ರಕರಣದ ವಿಚಾರಣೆ ವೇಳೆ ನ್ಯಾ. ಸೌರಭ್ ಶ್ರೀವಾತ್ಸವ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಗ್ರಾ ಜಿಲ್ಲಾಧಿಕಾರಿಗಳ ಕಚೇರಿಯೆದುರು ನಡೆಯಲಿದ್ದ ಪ್ರತಿಭಟನಾ ಸಭೆಯನ್ನು ಪ್ರಸ್ತಾವಿಸಿ ಚೌಧುರಿ ಫರ್ಹಾನ್ ಉಸ್ಮಾನ್ ಎಂಬಾತ ಫೇಸ್‌ಬುಕ್‌ನಲ್ಲಿ ಮಾಡಿದ್ದ ಪೋಸ್ಟ್‌ಗೆ ಇಮ್ರಾನ್ ಖಾನ್ ಲೈಕ್ ಒತ್ತಿದ್ದ. ಪ್ರಚೋದನಕಾರಿಯಾಗಿದ್ದ ಆ ಪೋಸ್ಟ್ 600-700 ಮುಸ್ಲಿಮರು ಜಮಾವಣೆಯಾಗಿ, ಅನುಮತಿ ಪಡೆಯದೆ ಮೆರವಣಿಗೆ ನಡೆಸಲು ಕಾರಣವಾಯಿತು ಎಂದು ಇಮ್ರಾನ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲದೆ, ಗಲಭೆ ಹಾಗೂ ಕಾನೂನುಬಾಹಿರ ಜಮಾವಣೆಗೆ ಸಂಬಂಧಿಸಿದ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, 'ಪ್ರಶ್ನಾರ್ಹವಾದ ಪೋಸ್ಟ್‌ಗೆ ಇಮ್ರಾನ್ ಲೈಕ್ ಮಾತ್ರ ಕೊಟ್ಟಿದ್ದಾರೆ. ಆದ್ದರಿಂದ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಅಪರಾಧವೆಂಬುದಾಗಿ ಪರಿಗಣಿಸಲ್ಪಡುವುದಿಲ್ಲ' ಎಂದಿದದೆ.