ನವದೆಹಲಿ: 'ಎಚ್‌ಐವಿ ಸೋಂಕಿತರಿಗೆ ಉದ್ಯೋಗದಲ್ಲಿ ಬಡ್ತಿ ನೀಡದೇ ಅಥವಾ ಕೆಲಸಕ್ಕೆ ನೇಮಕ ಮಾಡಿಕೊಳ್ಳದೇ ಇರುವಂತಿಲ್ಲ. ಉದ್ಯೋಗದಲ್ಲಿ ಎಚ್‌ಐವಿ ಸೋಂಕಿತರಿಗೂ ಆದ್ಯತೆ ನೀಡಬೇಕು' ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಬಿಎಸ್‌ಎಫ್ ಮತ್ತು ಕೇಂದ್ರ ಮೀಸಲು ಪಡೆಗಳಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳಿಗೆ ಬಡ್ತಿ ನಿರಾಕರಿಸಲಾಗಿತ್ತು.
2023ರಲ್ಲಿ ಎಚ್‌ಐವಿ ಸೋಂಕಿತನನ್ನು ಬಿಎಸ್‌ಎಫ್‌ಗೆ ಪ್ರೊಬೇಷನರಿಯಾಗಿ ನೇಮಕ ಮಾಡಿಕೊಳ್ಳಲು ನಿರಾಕರಿಸಲಾಗಿತ್ತು. ಈ ಮೂವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಗಳ ಸಂಬಂಧ ನ್ಯಾಯಾಲಯವು ಮಾರ್ಚ್ 28ರಂದು ತೀರ್ಪು ನೀಡಿದೆ.
'ಎಚ್‌ಐವಿ ಸೋಂಕಿರುವ ಕಾರಣಕ್ಕೆ ಬಡ್ತಿ ಹಾಗೂ ನೇಮಕವನ್ನು ನಿರಾಕರಿಸಿದ್ದು, ಎಚ್‌ಐವಿ ಕಾಯ್ದೆಗೆ (ಎಚ್‌ಐವಿ ಇರುವ ಕಾರಣಕ್ಕೆ ವ್ಯಕ್ತಿಯ ಕುರಿತು ತಾರತಮ್ಯ ಧೋರಣೆ ಇರಬಾರದು ಎಂದು ಕಾಯ್ದೆ ಹೇಳುತ್ತದೆ) ವಿರುದ್ಧವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅರ್ಜಿದಾರರಿಗೆ ಬಡ್ತಿ ನೀಡದಿರುವ ಬಗ್ಗೆ ಮರುಪರಿಶೀಲನೆ ನಡೆಸಬೇಕು ಜೊತೆಗೆ ಇನ್ನೊಬ್ಬ ಅರ್ಜಿದಾರರನ್ನು ನೇಮಕ ಮಾಡಿಕೊಳ್ಳುವ ಬಗ್ಗೆಯೂ ಕ್ರಮ ಕೈಗೊಳ್ಳಬೇಕು' ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಹಾಗೂ ಶೈಲಿಂದರ್ ಕೌರ್ ಸೂಚಿಸಿದರು.