ವಾಷಿಂಗ್ಟನ್: ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತಿರುವ 2.2 ಬಿಲಿಯನ್ ಡಾಲರ್‌ಗೂ ಅಧಿಕ ಪ್ರಮಾಣದ ನಿಧಿಯನ್ನು ಸ್ಥಗಿತಗೊಳಿಸುವುದಾಗಿ ನಿರಂತರ ಬೆದರಿಕೆ ಹಾಕುತ್ತಿರುವ ಆರೋಪದ ಮೇಲೆ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯವು ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಿದೆ.
ಟ್ರಂಪ್ ಆಡಳಿತವು ವಿಶ್ವವಿದ್ಯಾಲಯದ ಮೇಲೆ ಅಭೂತಪೂರ್ವ ಮತ್ತು ಅನುಚಿತ ನಿಯಂತ್ರಣ ಬಳಸಲು ಪ್ರಯತ್ನಿಸುತ್ತಿದೆ ಎಂದು ವಿಶ್ವವಿದ್ಯಾಲಯದ ಅಧ್ಯಕ್ಷ ಅಲನ್ ಎಂ ಗಾರ್ಬರ್ ಆರೋಪಿಸಿದ್ದಾರೆ. ಸರ್ಕಾರದ ಕ್ರಮವು ತೀವ್ರ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ ಎಂದೂ ಹೇಳಿದ್ದಾರೆ.
ಯೆಹೂದಿ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಪಕ್ಷಪಾತದ ಕುರಿತಂತೆ ಎಲ್ಲ ವಿಶ್ವವಿದ್ಯಾಲಯಗಳಿಂದ ಟ್ರಂಪ್ ಆಡಳಿತ ವರದಿ ಕೋರಿದ ನಂತರ ಈ ಬೆಳವಣಿಗೆ ನಡೆದಿದೆ.
ಒಬ್ಬ ಯೆಹೂದಿ ಮತ್ತು ಅಮೆರಿಕನ್ ಆಗಿ, ಹೆಚ್ಚುತ್ತಿರುವ ಯೆಹೂದಿ ವಿರೋಧದ ಬಗ್ಗೆ ಕಳವಳಗಳಿವೆ ಎಂದು ನನಗೆ ಚೆನ್ನಾಗಿ ತಿಳಿದಿದೆ. ನಾವು ಯಾರನ್ನು ನೇಮಕ ಮಾಡಿಕೊಳ್ಳುತ್ತೇವೆ ಮತ್ತು ನಾವು ಏನನ್ನು ಬೋದಿಸುತ್ತೇವೆ ಎಂಬುದನ್ನು ನಿಯಂತ್ರಿಸಲು ಪ್ರಯತ್ನಿಸುವ ಬದಲು ಸರ್ಕಾರವು ವಿಶ್ವವಿದ್ಯಾಲಯದೊಂದಿಗೆ ಕಾನೂನುಬದ್ಧವಾಗಿ ವ್ಯವಹರಿಸಬೇಕು ಎಂದು ಗಾರ್ಬರ್ ಹೇಳಿದ್ದಾರೆ.
ಈ ಸಂಬಂಧ ಟ್ರಂಪ್ ಆಡಳಿತದ ವಿರುದ್ಧ ಮೆಸಾಚುಯೆಟ್ಸ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಇತರೆ ವಿಶ್ವವಿದ್ಯಾಲಯಗಳಿಗೆ ಅಸಮರ್ಪಕ ಅನುದಾನ ನೀಡಲಾಗುತ್ತಿದೆ ಎಂದೂ ದೂರಲಾಗಿದೆ.
ವಿಶ್ವವಿದ್ಯಾಲಯವು ಬೇಡಿಕೆಗಳಿಗೆ ಮಣಿಯಲು ನಿರಾಕರಿಸಿದರೆ, 2.2 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಅನುದಾನ ಮತ್ತು ಒಪ್ಪಂದಗಳನ್ನು ಸ್ಥಗಿತಗೊಳಿಸುವುದಾಗಿ ಟ್ರಂಪ್ ಆಡಳಿತ ಬೆದರಿಕೆ ಹಾಕಿದೆ. ವೈವಿಧ್ಯ ಕಾರ್ಯಕ್ರಮಗಳನ್ನು ತೆಗೆದುಹಾಕುವುದು, ಅರ್ಹತೆ ಆಧಾರಿತ ನೇಮಕಾತಿ ಮತ್ತು ಪ್ರವೇಶ ಸುಧಾರಣೆಗಳನ್ನು ಜಾರಿಗೆ ತರುವುದು, ಅಧ್ಯಾಪಕರು ಹಾಗೂ ನಿರ್ವಾಹಕರ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹಾರ್ವರ್ಡ್‌ಗೆ ನೀಡಲಾಗಿರುವ 1 ಶತಕೋಟಿ ಡಾಲರ್ ಫೆಡರಲ್ ಆರೋಗ್ಯ ಸಂಶೋಧನಾ ಒಪ್ಪಂದಗಳನ್ನು ಸಹ ತಡೆಹಿಡಿಯಬಹುದು ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವಾರಾಂತ್ಯದಲ್ಲಿ ವರದಿ ಮಾಡಿದೆ.