ವಲಸಾಡ್ : 'ಧರ್ಮವೊಂದೇ ಎಲ್ಲರನ್ನೂ ಸಂತೋಷದತ್ತ ಕೊಂಡೊಯ್ಯಬಲ್ಲದು. ಆದರೆ, ದುರಾಸೆ ಅಥವಾ ಭಯಕ್ಕೆ ಬಿದ್ದು ಯಾರೂ ತಮ್ಮ ಧರ್ಮವನ್ನು ಬದಲಿಸಬಾರದು' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದ್ದಾರೆ.
ಗುಜರಾತಿನ ವಲಸಾಡ್ ಜಿಲ್ಲೆಯ ಬಾರುಮಲ್‌ನ ಸದ್ಗುರುಧಾಮ್‌ನಲ್ಲಿನ ಶ್ರೀ ಭಾವ್ ಭಾವೇಶ್ವರ ಮಹಾದೇವ ದೇವಾಲಯದ ರಜತ ಮಹೋತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.
'ನಿತ್ಯ ಬದುಕಿನಲ್ಲಿ ದುರಾಸೆ, ಪ್ರಲೋಭನೆ ಮತ್ತು ಆಮಿಷವು ಜನರನ್ನು ತಮ್ಮ ಧರ್ಮದಿಂದ ವಿಮುಖಗೊಳಿಸಬಹುದು. ಆದರೆ, ಧರ್ಮ ಮಾತ್ರ ಎಲ್ಲರನ್ನೂ ಸಂತೋಷದ ಕಡೆಗೆ ಕರೆದೊಯ್ಯುತ್ತದೆ. ಜನರು ದುರಾಸೆಗೆ ಒಳಗಾಗಿ ಅಥವಾ ಭಯದಿಂದ ಧರ್ಮವನ್ನು ಎಂದಿಗೂ ಬಿಡಬಾರದು' ಎಂದು ಭಾಗವತ್ ಹೇಳಿದರು.
'ಇಂದು ನಮ್ಮನ್ನು ಮತಾಂತರಿಸಬೇಕೆಂದು ಬಯಸುವ ಶಕ್ತಿಗಳಿವೆ. ಅದಕ್ಕಾಗಿ ದೈನಂದಿನ ಜೀವನದಲ್ಲಿ ದುರಾಸೆ ಹುಟ್ಟಿಸುವ, ಪ್ರಲೋಭನೆ ತೋರುವ ಮತ್ತು ಆಮಿಷವೊಡ್ಡುವ ಘಟನೆಗಳು ನಡೆಯುತ್ತಿರುತ್ತವೆ. ಹಾಗಾಗಿ, ಇಂದು ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಿದೆ' ಎಂದು ಭಾಗವತ್ ಹೇಳಿದರು.
'ನಮ್ಮದು ಧರ್ಮದ ದೇಶ. ಧಾರ್ಮಿಕ ನಡವಳಿಕೆಯು ಸಮಾಜವನ್ನು ಆವರಿಸಿದಾಗ ನಮ್ಮ ದೇಶವು ಉನ್ನತಿ ಕಾಣುತ್ತದೆ. ಇದಕ್ಕಾಗಿ ಇಡೀ ಜಗತ್ತು ನಮ್ಮತ್ತ ನೋಡುತ್ತಿದೆ. ಧಾರ್ಮಿಕ ಕೇಂದ್ರಗಳನ್ನು ಬಲಪಡಿಸುವುದು ನಮ್ಮ ಕೆಲಸ. ಹಾಗೆ ಮಾಡುವುದು ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದಂತೆ. ಇದು ಇಡೀ ಮಾನವೀಯತೆಯ ಕಲ್ಯಾಣವನ್ನೂ ಖಾತ್ರಿಪಡಿಸುತ್ತದೆ. ಹಾಗೆಯೇ ಹಬ್ಬಗಳು ಮತ್ತು ದೇವಾಲಯಗಳಲ್ಲಿನ ನಿತ್ಯ ಪೂಜೆಗಳು ಸಹ ಆರ್ಥಿಕತೆಗೆ ಕೊಡುಗೆ ನೀಡುತ್ತವೆ' ಎಂದು ಭಾಗವತ್ ಹೇಳಿದರು.