ಕಾಸರಗೋಡು: ರಾಜ್ಯದ ಜನತೆಯನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡುತ್ತಿರುವ ಎಡರಂಗ ಸರ್ಕಾರ, ಜನರ ತೆರಿಗೆ ಹಣವನ್ನು ಬಳಸಿಕೊಂಡು ತನ್ನ ಆಡಳಿತದ ನಾಲ್ಕನೇ ವರ್ಷ ಆಚರಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಕೇರಳ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ತಿಳಿಸಿದ್ದಾರೆ.
ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಆಗಮಿಸಿದ್ದ ಅವರು ಬಿಜೆಪಿ ಜಿಲ್ಲಾಸಮಿತಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ಕೇರಳದ ಎಡರಂಗ ಸರ್ಕಾರ ಜನರ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ. ವನಿತಾ ಪೆÇೀಲೀಸ್ ಕಾನ್ಸ್ಟೇಬಲ್, ಆಶಾ ಕಾರ್ಯಕರ್ತೆಯರು ಮತ್ತು ಅಸಹಾಯಕರಾದ ಒಂದಷ್ಟು ಜನತೆಯ ಬೇಡಿಕೆಗಳಿಗೆ ಚಿಕ್ಕಾಸಿನ ಬೆಲೆ ನೀಡದೇ, ನಿರ್ಲಕ್ಷ್ಯ ಮನೋಭಾವ ತಾಳುತ್ತಿದೆ. ಅಸಹಾಯಕ ಜನತೆಯ ಕಣ್ಣೀರ ರೋದನದ ನಡುವ ಸರ್ಕಾರ ತನ್ನ ನಾಲ್ಕನೇ ವರ್ಷವನ್ನು ಆಚರಿಸುತ್ತಿರುವುದು ಜನತೆಗೆ ಎಸಗುವ ವಂಚನೆಯಾಗಿದೆ. ಕೇರಳದಲ್ಲಿ ನಡೆಯುತ್ತಿರುವ ಹಲವು ನ್ಯಾಯೋಚಿತ ಸತ್ಯಾಗ್ರಹವನ್ನು ಸರ್ಕಾರ ದಮನಿಸಲು ಯತ್ನಿಸುತ್ತಿದೆ. ಕಮ್ಯೂನಿಸ್ಟ್ ಸರ್ಕಾರದ ಅಸಹಾಯತನ ಇದರಿಂದ ಸಾಬೀತಾಗುತ್ತಿದೆ. ಮುಂದೆ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿರಿಸಿ, ಜನರ ತೆರಿಗೆ ಹಣದಿಂದ ವರ್ಷಾಚರನೆಯ ಉತ್ಸವ ನಡೆಸಲು ಮುಂದಾಗಿರುವ ಸರ್ಕಾರಕ್ಕೆ ಜನತೆ ಸೂಕ್ತ ಪಾಠ ಕಲಿಸಲಿದ್ದಾರೆ.
ಕೇರಳ ಸರ್ಕಾರದ ಜನವಿರೋಧಿ ಆಡಳಿತ ವೈಖರಿಯನ್ನು ಜನತೆಯ ಮುಂದಿಟ್ಟು, ಜನಪರ ಹೋರಾಟಕ್ಕೆ ಬಿಜೆಪಿ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಎ.21ರಿಂದ ಮೇ10ರ ತನಕ ಕೇರಳ ರಾಜ್ಯ ವ್ಯಾಪಕ ಕೇರಳ ಯಾತ್ರೆ ಮತ್ತು ವಿಕಸಿತ ಕೇರಳ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಉಪಸ್ಥಿತರಿದ್ದರು.