ನವದೆಹಲಿ: ವಾಹನಗಳ 'ಹಾರ್ನ್'ನಲ್ಲಿ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ಮಾತ್ರ ಬಳಸುವಂತೆ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿರುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದರು.
'ನವಭಾರತ್ ಟೈಮ್ಸ್'ನ 78ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, 'ಎಲ್ಲ ವಾಹನಗಳ ಹಾರ್ನ್‌ಗಳಲ್ಲಿ ಕೊಳಲು, ತಬಲಾ, ಪಿಟೀಲು, ಹಾರ್ಮೋನಿಯಂ ಸೇರಿದಂತೆ ಕೇಳಲು ಹಿತವೆನಿಸುವ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ಬಳಸುವಂತೆ ಕಾನೂನು ರೂಪಿಸಲು ನಾನು ಯೋಜಿಸುತ್ತಿದ್ದೇನೆ' ಎಂದು ತಿಳಿಸಿದರು.
ದೇಶದಲ್ಲಿ ಸಾರಿಗೆ ವಲಯವು ಶೇ 40ರಷ್ಟು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದನ್ನು ನಿಯಂತ್ರಿಸಲು ಮೋದಿ ಸರ್ಕಾರ ಎಥನಾಲ್, ಮೆಥನಾಲ್, ಜೈವಿಕ ಇಂಧನ ಬಳಕೆ ಸೇರಿದಂತೆ ಹಸಿರು ವಾಹನಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ದ್ವಿಚಕ್ರ ವಾಹನ ಮತ್ತು ಕಾರುಗಳ ರಫ್ತಿನಿಂದ ದೇಶವು ಗರಿಷ್ಠ ಆದಾಯ ಪಡೆಯುತ್ತಿದೆ ಎಂದು ಅವರು ವಿವರಿಸಿದರು.