ಕಠ್ಮಂಡು:ನೇಪಾಳದಲ್ಲಿ ರಾಜಕೀಯ ಬದಲಾವಣೆಯ ಗಾಳಿ ವೇಗವಾಗಿ ಬೀಸುತ್ತಿದೆ. ರಾಜಕೀಯ ಅಸ್ಥಿರತೆ, ರಾಜಕೀಯ ನಾಯಕರ ಟೊಳ್ಳು ಭರವಸೆಯಿಂದ ರೋಸಿಹೋಗಿರುವ ನೇಪಾಳಿಗರು ಎರಡು ಬೇಡಿಕೆಗಳನ್ನು ಇರಿಸಿಕೊಂಡು ಪ್ರತಿಭಟನೆಯ ಕಾವನ್ನು ಹೆಚ್ಚಿಸಿದ್ದಾರೆ. ದೇಶದಲ್ಲಿ ಮತ್ತೆ ರಾಜಪ್ರಭುತ್ವ ಸ್ಥಾಪಿಸಬೇಕು ಮತ್ತು ನೇಪಾಳವನ್ನು ಮೊದಲಿನಂತೆ ಹಿಂದು ರಾಷ್ಟ್ರವಾಗಿ ಘೋಷಿಸಬೇಕು ಎಂಬ ಆಗ್ರಹ ರಾಜಧಾನಿ ಕಾಠ್ಮಂಡುವಿನಲ್ಲಿ ಜೋರಾಗಿ ಅನುರಣಿಸಿದೆ.
ಮಾಜಿ ರಾಜ ಜ್ಞಾನೇಂದ್ರ ಶಾ ಅವರ ಬೆಂಬಲಿಗರು ಶುಕ್ರವಾರ (ಮಾರ್ಚ್ 28)ದಂದು ಕಾಠ್ಮಂಡುವಿನಲ್ಲಿ ನಡೆಸಿದ ಪ್ರತಿಭಟನೆ, ಇತರೆಡೆಯೂ ವ್ಯಾಪಿಸುವ ಲಕ್ಷಣಗಳಿವೆ. ಆದರೆ, ಶುಕ್ರವಾರದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಸ್ಥಳದಲ್ಲೇ ಓರ್ವ ಪತ್ರಕರ್ತ ಸೇರಿದಂತೆ ಇಬ್ಬರು ಮೃತಪಟ್ಟರೆ, 112ಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ಜನರಲ್ಲಿ ಕಳವಳವನ್ನೂ ಹುಟ್ಟುಹಾಕಿದೆ. ಘಟನೆ ಸಂಬಂಧ ಪೊಲೀಸರು 105 ಜನರನ್ನು ಬಂಧಿಸಿದ್ದಾರೆ.
ತೀವ್ರಗೊಂಡ ಪ್ರತಿಭಟನೆ: ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ತೀವ್ರವಾಗಿ ಹೆಚ್ಚಿರುವ ಭ್ರಷ್ಟಾಚಾರ ಜನರಲ್ಲಿನ ಆಕ್ರೋಶ ಹೆಚ್ಚಿಸಿದೆ. ಹಾಗಾಗಿಯೇ 'ರಾಜ ಬರಲಿ, ದೇಶ ಉಳಿಸಲಿ', 'ನಮಗೆ ಮರಳಿ ರಾಜಪ್ರಭುತ್ವ ಬೇಕು' ಎಂದು ಜನರು ಆಗ್ರಹಿಸುತ್ತಿದ್ದಾರೆ. ಒಂದೇರಡಲ್ಲ, 40ಕ್ಕೂ ಅಧಿಕ ಸಂಘಟನೆಗಳು ರಾಜಪ್ರಭುತ್ವದ ಸ್ಥಾಪನೆಗೆ ಆಗ್ರಹಿಸುತ್ತಿವೆ. ಹಾಗೆಯೇ, 'ಜಾತ್ಯತೀತ ರಾಷ್ಟ್ರ' ಎಂಬುದನ್ನು ಬದಲಿಸಿ ನೇಪಾಳವನ್ನು ಮತ್ತೆ ಹಿಂದುರಾಷ್ಟ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒಂದು ವಾರದ ಗಡುವು ವಿಧಿಸಿರುವ ಪ್ರತಿಭಟನಾಕಾರರು ಆ ಬಳಿಕ ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸುವುದಾಗಿ ಹೇಳಿದ್ದಾರೆ. ನೇಪಾಳದ ಗಣರಾಜ್ಯೋತ್ಸವ ದಿನವಾದ ಫೆಬ್ರವರಿ 19ರಂದು ಮಾಜಿ ರಾಜ ಜ್ಞಾನೇಂದ್ರ ಶಾ ಜನರ ಬೆಂಬಲ ಕೋರಿ, ಕರೆ ನೀಡಿದ್ದರು.
ಆ ಬಳಿಕವೇ ರಾಜಪ್ರಭುತ್ವ ಪುನಃ ಸ್ಥಾಪನೆಗೆ ಪ್ರತಿಭಟನೆ ಆರಂಭಗೊಂಡಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ ಮಾರ್ಚ್ 28ರಂದು ತೀವ್ರ ಸ್ವರೂಪ ಪಡೆದಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಮಾಜಿ ರಾಜ ಜ್ಞಾನೇಂದ್ರ ಶಾ ದೇಶಾದ್ಯಂತ ಧಾರ್ವಿುಕ ಸ್ಥಳಗಳಿಗೆ ಭೇಟಿ ನೀಡಿ, ಬೆಂಬಲಿಗರ ರ‍್ಯಾಲಿ ನಡೆಸಿದ್ದು, ಸಾವಿರಾರು ಜನರು ಭಾಗವಹಿಸಿದ್ದಾರೆ.
ಸಮಸ್ಯೆಗಳ ಚಕ್ರವ್ಯೂಹ
ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ (2008) 17 ವರ್ಷಗಳಲ್ಲೇ 11 ಸರ್ಕಾರಗಳು ಬಂದು ಹೋಗಿವೆ ಎಂದರೆ ನೇಪಾಳದಲ್ಲಿನ ರಾಜಕೀಯ ಅಸ್ಥಿರತೆಯ ತೀವ್ರತೆ ಅರ್ಥಮಾಡಿಕೊಳ್ಳಬಹುದು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಮೇಲೆ ರಾಜಕೀಯ ನಾಯಕರು ದೇಶಹಿತ ಮರೆತು ವೈಯಕ್ತಿಕ ಹಿತವನ್ನೇ ಮುಖ್ಯವಾಗಿಸಿಕೊಂಡಿದ್ದಾರೆ. ಹೀಗಾಗಿ ಸ್ಥಿರ ಆಡಳಿತ ಮರೀಚಿಕೆಯಾಗಿದೆ. ಯುವಕರು ಉದ್ಯೋಗ ಸಿಗದೆ ಮಲೇಷ್ಯಾ, ದಕ್ಷಿಣ ಕೊರಿಯಾ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳಿಗೆ ಪಲಾಯನಗೈಯ್ಯುತ್ತಿದ್ದಾರೆ.
ಆಡಳಿತ ವ್ಯವಸ್ಥೆ ವಿಫಲ
240 ವರ್ಷಗಳ ರಾಜಪ್ರಭುತ್ವ 2008ರಲ್ಲಿ ಅಂತ್ಯಗೊಂಡು, ಆಗಿನ ರಾಜ ಜ್ಞಾನೇಂದ್ರ ಎಲ್ಲ ಅಧಿಕಾರಗಳನ್ನು ಸಂಸತ್ತಿಗೆ ಹಸ್ತಾಂತರಿಸಿದರು. 2008ರಿಂದ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಯಾದರೂ, ಯಾವುದೇ ಪಕ್ಷದ ಸರ್ಕಾರ ಪೂರ್ಣಾವಧಿ ಅಧಿಕಾರ ನಡೆಸಿಲ್ಲ. ಪದೇಪದೆ ನಡೆಯುವ ಚುನಾವಣೆ, ಪ್ರಧಾನಿ, ರಾಷ್ಟ್ರಪತಿಗಳ ಬದಲಾವಣೆಯಿಂದ ಆಡಳಿತ ವೇಗ ಕಳೆದುಕೊಂಡಿದೆ.
ಸರ್ಕಾರದ ವಿರುದ್ಧ ಆಕ್ರೋಶಕ್ಕೆ ಕಾರಣಗಳು
ರಾಜಕೀಯ ಅಸ್ಥಿರತೆ. ಅಧಿಕಾರಕ್ಕಾಗಿ ರಾಜಕೀಯ ಪಕ್ಷಗಳು ಮತ್ತು ನಾಯಕರ ಆಂತರಿಕ ಕಚ್ಚಾಟ. ಆರ್ಥಿಕ ಸಂಕಷ್ಟ, ಬೆಲೆಯೇರಿಕೆ. ಭ್ರಷ್ಟಾಚಾರ, ಹಗರಣದಲ್ಲೇ ತೊಡಗಿರುವ ಆಡಳಿತ ಪಕ್ಷ. ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ.ಸಾಂಸ್ಕೃತಿಕ, ಧಾರ್ವಿುಕ ಅಸ್ಮಿತೆ ಅಪಾಯಕ್ಕೆ ಸಿಲುಕಿರುವುದು. ಒಂದು ಪರಂಪರೆ, ಮೌಲ್ಯಗಳಿಗೆ ಅವಗಣನೆ.
ಹೆಚ್ಚುತ್ತಿದೆ ಜನರ ಸಹಭಾಗಿತ್ವ
ಈ ಬಾರಿ ಜನಸಾಮಾನ್ಯರು ಭಾರಿ ಸಂಖ್ಯೆಯಲ್ಲಿ ಸರ್ಕಾರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದರಲ್ಲಿ ಯುವಕರು, ರೈತರು, ಮಧ್ಯಮವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 'ರಾಜಪ್ರಭುತ್ವವೇ ನಮ್ಮ ಹಾಗೂ ದೇಶದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲುದು' ಎಂಬುದು ಇವರ ಬಲವಾದ ನಂಬಿಕೆ. ಆಡಳಿತ ಪಕ್ಷದ ಮೇಲೆ ಭ್ರಷ್ಟಾಚಾರದ ಗಂಭೀರ ಆರೋಪಗಳಿರುವುದರಿಂದ ಜನರು ರಾಜಕೀಯ ಪಕ್ಷಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ.
ಅಪಾಯದಲ್ಲಿ ಹಿಂದು ಅಸ್ಮಿತೆ
ಜಗತ್ತಿನ ಏಕೈಕ ಹಿಂದು ರಾಷ್ಟ್ರವಾಗಿದ್ದ ನೇಪಾಳವನ್ನು 2008ರಲ್ಲಿ 'ಜಾತ್ಯತೀತ ರಾಷ್ಟ್ರ'ವಾಗಿ ಘೋಷಿಸಿದ ರಾಜಕೀಯ ನಿರ್ಧಾರದ ಬಗ್ಗೆಯೂ ಜನರ ಮನಸ್ಸಿನಲ್ಲಿ ಬೇಸರ ಮಡುಗಟ್ಟಿದೆ. 'ಈ ಕ್ರಮದಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ವಿುಕ ಅಸ್ಮಿತೆಯೇ ಅಪಾಯಕ್ಕೆ ಸಿಲುಕಿದೆ. ಪ್ರಜಾಪ್ರಭುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಅನ್ಯ ಧರ್ಮ ಹಾಗೂ ಧರ್ವಿುಯರಿಗೆ ಒತ್ತು ನೀಡುತ್ತಿವೆ. ಹಿಂದು ಪರಂಪರೆ ಮತ್ತು ಮೌಲ್ಯಗಳಿಗೆ ಆಘಾತ ನೀಡುತ್ತಿವೆ. ಹಾಗಾಗಿ, ರಾಜಪ್ರಭುತ್ವವೇ ನೇಪಾಳವನ್ನು ಮತ್ತೆ ಹಿಂದುರಾಷ್ಟ್ರವಾಗಿಸಿ, ಪಾರಂಪರಿಕ ಅಸ್ಮಿತೆಯನ್ನು ಉಳಿಸಬಲ್ಲದು' ಎಂಬುದು ಪ್ರತಿಭಟನಾಕಾರರ ನಿಲುವು.