ಬದಿಯಡ್ಕ: ಇತ್ತೀಚೆಗೆ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿದ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸೋಮವಾರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಭೇಟಿ ನೀಡಿದರು.
ಶ್ರೀಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತವನ್ನು ನೀಡಿ ಭಕ್ತಿಪುರಸ್ಸರವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಪ್ರಾಚೀನ ಕಾರಣಿಕದ ಈ ಕ್ಷೇತ್ರ ಭಕ್ತಜನರ ಮುತುವರ್ಜಿಯಿಂದ ಪುನರ್ ನವೀಕರಣಗೊಂಡಿರುವುದು ಸಂತಸ ತಂದಿದೆ. ಜಗನ್ನಿಯಾಮಕನಾದ ಮಹಾವಿಷ್ಣು ಭಕ್ತರ ಮನೋಭಿಷ್ಟಗಳನ್ನು ಪೂರೈಸಲಿ. ಮುಂದೆಯೂ ಇನ್ನಷ್ಟು ಪ್ರಗತಿ ಈ ಕ್ಷೇತ್ರದ ಮೂಲಕ ಸಮಾಜಕ್ಕೆ ಲಭಿಸಲೆಂದು ಹಾರೈಸಿ ಮಂತ್ರಾಕ್ಷತೆ ನೀಡಿದರು.
ಕ್ಷೇತ್ರದ ಪವಿತ್ರಪಾಣಿ ನರಸಿಂಹ ಭಟ್ ಕಾರ್ಮಾರು, ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಟ್ರಸ್ಟಿಗಳಾದ ಸುಂದರ ಶೆಟ್ಟಿ ಕೊಲ್ಲಂಗಾನ, ಜನಪ್ರತಿನಿಧಿ ಶ್ಯಾಮಪ್ರಸಾದ ಮಾನ್ಯ, ಯುವಕ ವೃಂದದ ಅಧ್ಯಕ್ಷ ವಿಜಯಕುಮಾರ ಮಾನ್ಯ, ಶ್ರೀರಾಮಚಂದ್ರಾಪುರ ಮಠದ ಮಾತೃತ್ವಂ ಅಧ್ಯಕ್ಷೆ ಈಶ್ವರಿ ಬೇರ್ಕಕಡವು, ಪತ್ರಕರ್ತ ಶ್ಯಾಮಸುದರ್ಶನ ಹೊಸಮೂಲೆ, ಶ್ರೀಹರಿಪ್ರಸಾದ್ ಪೆರ್ಮುಖ, ಮಂಡಲ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಊರವರು ಉಪಸ್ಥಿತರಿದ್ದರು.