ನವದೆಹಲಿ: ಸುಮಾರು 2 ವರ್ಷಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಹಿಂಸಾಚಾರ ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅವರು, 'ಮಣಿಪುರ ಹಿಂಸಾಚಾರದಲ್ಲಿ 260ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
60,000ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ. 4,700 ಕ್ಕೂ ಹೆಚ್ಚು ಮನೆಗಳು ಸುಟ್ಟುಹೋಗಿವೆ ಮತ್ತು ಶಾಲೆಗಳು, ಆಸ್ಪತ್ರೆಗಳು ಹಾಗೂ ಪೂಜಾ ಸ್ಥಳಗಳು ಸೇರಿದಂತೆ 13,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆ. ಆದರೂ ಬಿಜೆಪಿ ಎಲ್ಲವನ್ನು ಮೌನವಾಗಿ ನೋಡುತ್ತಿತ್ತು' ಎಂದು ಕಿಡಿಕಾರಿದ್ದಾರೆ.
2023ರ ಮೇ 3ರಿಂದ ಜುಲೈ 30ರ ನಡುವೆ ಮಣಿಪುರದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕೊಲೆ ಮತ್ತು ಲೂಟಿಗೆ ಸಂಬಂಧಿಸಿದಂತೆ 3,000ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಾಗಿವೆ. 204 ದಿನಗಳವರೆಗೆ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಯಿತು, ಪೊಲೀಸ್ ಠಾಣೆಗಳಿಂದ ಎಕೆ-47ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಕಳವು ಮಾಡಲಾಯಿತು. ಇದೆಲ್ಲದರ ಪರಿಣಾಮ, ಮಣಿಪುರ ಆರ್ಥಿಕತೆ ಕುಸಿಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಸಂದರ್ಭಗಳಲ್ಲಿಯೂ ಬಿಜೆಪಿ ಮಣಿಪುರವನ್ನು ಉಳಿಸುವ ಬದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಳಿಸಲು ಕೆಲಸ ಮಾಡುತ್ತಿತ್ತು. ಆದ್ದರಿಂದಲೇ ಪ್ರಧಾನಿ ಮೋದಿ ಅವರು ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ದೇಶದಾದ್ಯಂತ ಚುನಾವಣಾ ರ್‍ಯಾಲಿಗಳನ್ನು ನಡೆಸುತ್ತಾರೆ. ಆದರೆ, ಮಣಿಪುರಕ್ಕೆ ಹೋಗುವುದಿಲ್ಲ. ಮಣಿಪುರದ ಜನರು ಪ್ರಧಾನಿ ಮೋದಿಯವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿದ್ದು, ಬಿಜೆಪಿ ಅಸಮರ್ಥತೆಯಿಂದಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತಿದೆ. ನಾವೆಲ್ಲರೂ ಒಟ್ಟಾಗಿ ಮಣಿಪುರದ ಭವಿಷ್ಯಕ್ಕಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.