ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉದ್ಯಮಿ ಎಲಾನ್ ಮಸ್ಕ್ ವಿರುದ್ಧ ಅಮೆರಿಕದ ವಿವಿಧ ನಗರಗಳಲ್ಲಿ ಜನರು ಶನಿವಾರ ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಟ್ರಂಪ್ ಆಡಳಿತದ ನೀತಿಗಳು ಮತ್ತು ಮಸ್ಕ್ ನೇತೃತ್ವದ ಸರ್ಕಾರದ ದಕ್ಷತಾ ಇಲಾಖೆ (ಡಿಒಜಿಇ) ಕೈಗೊಂಡಿರುವ ಕ್ರಮಗಳ ವಿರುದ್ಧ ಪ್ರತಿಭಟನಕಾರರು 'ಹ್ಯಾಂಡ್ಸ್ ಆಫ್' ಹೆಸರಿನಲ್ಲಿ ಶನಿವಾರ ಎಲ್ಲ 50 ರಾಜ್ಯಗಳಲ್ಲಿ ರ್‍ಯಾಲಿ ನಡೆಸಿದರು.
ಮಾಜಿ ಸೈನಿಕರು, ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಪ್ರಚಾರ ನಡೆಸಿದವರು, ನಾಗರಿಕ ಹಕ್ಕುಗಳ ಮತ್ತು ಕಾರ್ಮಿಕ ಸಂಘಟನೆಗಳು, ಎಲ್‌ಜಿಬಿಟಿಕ್ಯು ಸಮುದಾಯ ಸೇರಿದಂತೆ 150ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡವು.
ಸಾವಿರಾರು ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಿರುವುದು, ಸಾಮಾಜಿಕ ಭದ್ರತಾ ಆಡಳಿತದ ಕಚೇರಿಗಳನ್ನು ಮುಚ್ಚಿರುವುದು, ವಲಸಿಗರ ಗಡೀಪಾರು, ಲಿಂಗತ್ವ ಅಲ್ಪಸಂಖ್ಯಾತರ ಸುರಕ್ಷತೆಗಾಗಿ ಇದ್ದ ಯೋಜನೆಗಳನ್ನು ರದ್ದುಗೊಳಿಸಿರುವುದು ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ಸರ್ಕಾರದ ಅನುದಾನ ಕಡಿತಗೊಳಿಸುವ ಟ್ರಂಪ್ ಆಡಳಿತದ ನಿರ್ಧಾರಗಳನ್ನು ಪ್ರತಿಭಟನಕಾರರು ಖಂಡಿಸಿದರು.
ವಾಷಿಂಗ್ಟನ್ ಡಿ.ಸಿಯ ನ್ಯಾಷನಲ್ ಮಾಲ್ ಬಳಿ, ನ್ಯೂಯಾರ್ಕ್‌ನ ಮ್ಯಾನ್‌ಹಟನ್, ಮೆಸಾಚುಸೆಟ್ಸ್‌ನ ಬಾಸ್ಟನ್ ಕಾಮನ್ ಪಾರ್ಕ್ ಸೇರಿದಂತೆ ಎಲ್ಲ ರಾಜ್ಯಗಳ ವಿವಿಧ ತಾಣಗಳಲ್ಲಿ ಜನರು ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಫ್ಲಾರಿಡಾದಲ್ಲಿ ಟ್ರಂಪ್ ಒಡೆತನದಲ್ಲಿರುವ ಗಾಲ್ಫ್ ಕೋರ್ಸ್‌ನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಪಾಮ್ ಬೀಚ್ ಗಾರ್ಡನ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ನೂರಾರು ಮಂದಿ ಭಾಗವಹಿಸಿದರು. ಒಹಿಯೊದ ಕೊಲಂಬಸ್‌ನಲ್ಲಿ ಜನರು ಮಳೆಯನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.