ನವದೆಹಲಿ: ರೋಮನ್ ಕ್ಯಾಥೋಲಿಕ್‌ನ ಮೊದಲ ಲ್ಯಾಟಿನ್ ಅಮೆರಿಕನ್ ಮೂಲದ ಪೋಪ್ ಫ್ರಾನ್ಸಿಸ್ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
'ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಈ ಸಂದರ್ಭದಲ್ಲಿ, ಜಾಗತಿಕ ಕ್ಯಾಥೋಲಿಕ್ ಸಮುದಾಯಕ್ಕೆ ನನ್ನ ಸಂತಾಪಗಳು' ಎಂದು ಪ್ರಧಾನಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
'ಪೋಪ್ ಫ್ರಾನ್ಸಿಸ್ ಅವರನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯಾವಾಗಲೂ ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ಚೈತನ್ಯದ ಸಂಕೇತವಾಗಿ ಸ್ಮರಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೂ, ಅವರು ಕ್ರಿಸ್ತನ ಆದರ್ಶಗಳನ್ನು ಅರಿತುಕೊಳ್ಳಲು ತಮ್ಮನ್ನು ತಾವು ಅರ್ಪಿಸಿಕೊಂಡರು. ಶ್ರದ್ಧೆಯಿಂದ ಬಡವರು ಮತ್ತು ದೀನದಲಿತರ ಸೇವೆ ಮಾಡಿದರು. ಅಲ್ಲದೇ ಅವರಿಗೆ ಭರವಸೆಯ ಬೆಳಕಾಗಿದ್ದರು' ಎಂದು ಪ್ರಧಾನಿ ಸ್ಮರಿಸಿದ್ದಾರೆ.
'ಅವರನ್ನು ಭೇಟಿ ಮಾಡಿ ಕ್ಷಣಗಳನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತೇನೆ. ಸಮಗ್ರ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಅವರ ಬದ್ಧತೆಯ ಬಗ್ಗೆ ನಾನು ಹೆಚ್ಚು ಪ್ರೇರಿತನಾಗಿದ್ದೆ. ಭಾರತದ ಜನರ ಮೇಲಿನ ಅವರ ವಾತ್ಸಲ್ಯ ಯಾವಾಗಲೂ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಪ್ರಧಾನಿ ಹೇಳಿದ್ದಾರೆ.