ತಿರುವನಂತಪುರಂ: ತಲೆ ಕೂದಲನ್ನು ಕತ್ತರಿಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ಆಶಾ ಕಾರ್ಯಕರ್ತೆಯರ ವಿರುದ್ಧ ಕಾರ್ಮಿಕ ಸಚಿವ ವಿ. ಶಿವನ್‌ಕುಟ್ಟಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆಶಾ ಕಾರ್ಯಕರ್ತೆಯರು ತಾವು ಕತ್ತರಿಸಿರುವ ತಲೆ ಕೂದಲನ್ನು ಸಚಿವರ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕೆಂದು ಒತ್ತಾಯಿಸುತ್ತೇನೆ' ಎಂದು ವ್ಯಂಗ್ಯವಾಡಿದ್ದಾರೆ.
ಆಶಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ಮುಂದೆ ತಮ್ಮ ಪ್ರತಿಭಟನೆ ಮತ್ತು ತಲೆ ಕೂದಲನ್ನು ಕತ್ತರಿಸಿಕೊಳ್ಳುವ ಪ್ರದರ್ಶನವನ್ನು ನಡೆಸಬೇಕಾಗಿತ್ತು. ಹಾಗೆಯೇ ಸ್ಥಳೀಯ ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದೂ ಶಿವನ್‌ಕುಟ್ಟಿ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಸುರೇಶ್ ಗೋಪಿ ಅವರು ಆಶಾ ಕಾರ್ಯಕರ್ತೆಯರಿಗೆ ಕೋಟುಗಳು ಮತ್ತು ಛತ್ರಿಗಳನ್ನು ವಿತರಿಸಿದ್ದಾರೆಯೇ ಹೊರತು ವೇತನ ಹೆಚ್ಚಳ ಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ ಎಂದು ಶಿವನ್‌ಕುಟ್ಟಿ ಕುಟುಕಿದ್ದಾರೆ.
ಆಶಾ ಸೇರಿದಂತೆ ಸ್ಕೀಮ್ ಕಾರ್ಮಿಕರಿಗೆ ಕಾರ್ಮಿಕರ ಸ್ಥಾನಮಾನ ನೀಡಬೇಕು ಮತ್ತು ಕೇಂದ್ರ ಕಾರ್ಮಿಕ ಕಾಯ್ದೆಯಡಿ ಸೌಲಭ್ಯಗಳಿಗೆ ಅರ್ಹರನ್ನಾಗಿ ಮಾಡಬೇಕು ಎಂದು ಕೋರಿ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆದು ಹಲವು ದಿನಗಳಾಗಿವೆ. ಆದರೆ, ಇದುವರೆಗೆ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ದೂರಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಅನುಮೋದಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೇಂದ್ರ ಸಚಿವರಾದ ಸುರೇಶ್ ಗೋಪಿ ಮತ್ತು ಜಾರ್ಜ್ ಕುರಿಯನ್ ಅವರನ್ನು ಶಿವನ್‌ಕುಟ್ಟಿ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ನೂರಾರು ಆಶಾ ಕಾರ್ಯಕರ್ತೆಯರು ಇಂದು (ಸೋಮವಾರ) ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಜತೆಗೆ, ತಲೆ ಕೂದಲನ್ನು ಕತ್ತರಿಸಿಕೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.