ವ್ಯಾಟಿಕನ್ ಸಿಟಿ: ಧಾರ್ಮಿಕ ಸ್ವಾತಂತ್ರ್ಯ ಹಾಗೂ ಇತರರ ಅಭಿಪ್ರಾಯಗಳನ್ನು ಗೌರವಿಸದ ಹೊರತು ಶಾಂತಿ ಸಾಧ್ಯವಿಲ್ಲ ಎಂದು ಪೋಪ್ ಫ್ರಾನ್ಸಿಸ್ ಈಸ್ಟರ್ ಭಾನುವಾರದ ಸಂದೇಶದಲ್ಲಿ ಹೇಳಿದ್ದಾರೆ.
ಸೈಂಟ್ ಪೀಟರ್ ಬೆಸಿಲಿಕದಲ್ಲಿ ಗಾಲಿ ಕುರ್ಚಿಯಲ್ಲಿಯೇ ಕುಳಿತು 88 ವರ್ಷದ ಪೋಪ್ ಭಕ್ತರಿಗೆ ದರ್ಶನ ನೀಡಿದರು.
ವಿಶ್ವದಲ್ಲಿ ಹೆಚ್ಚಾಗುತ್ತಿರುವ ಯಹೂದಿ ವಿರೋಧಿ ವಾತಾವರಣ ಆತಂಕಕಾರಿ ಎಂದು ಹೇಳಿರುವ ಪೋಪ್, ಗಾಜಾದ ಯುದ್ಧ ಪರಿಸ್ಥಿತಿಯನ್ನು ಖಂಡಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.
'ಗಾಜಾದ ಜನರು ಮತ್ತು ಅದರ ಕ್ರಿಶ್ಚಿಯನ್ ಸಮುದಾಯದ ಬಗ್ಗೆ ನಾನು ಚಿಂತಾಕ್ರಾಂತನಾಗಿದ್ದೇನೆ. ಭೀಕರ ಸಂಘರ್ಷವು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಶೋಚನೀಯ ಮಾನವೀಯ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಅವರು ಭಾಷಣದಲ್ಲಿ ಹೇಳಿದ್ದಾರೆ. ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ಅವರ ಪರವಾಗಿ ಇನ್ನೊಬ್ಬರು ಭಾಷಣ ಓದಿದರು.
ಅವರ ಈಸ್ಟರ್ ಭಾಷಣದ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ. ಭಾಷಣ ಕೇಳಲು ಸಂತ ಪೀಟರ್ಸ್ ಚೌಕದಲ್ಲಿ ಸುಮಾರು 35 ಸಾವಿರ ಮಂದಿ ಸೇರಿದ್ದರು.