HEALTH TIPS

ಕೈಮೀರುತ್ತಿರುವ ನೈರ್ಮಲ್ಯ ಪ್ರಜ್ಞೆ- ಎಚ್ಚೆತ್ತುಕೊಳ್ಳದ ಇಲಾಖೆಗಳು-ಕರಾಳ ಭವಿಷ್ಯದ ಸೂಚನೆಗಳೇ?-ಮಳೆಗಾಲ ಪೂರ್ವ ತಯಾರಿ ಆಮೆಗತಿಯಲ್ಲಿ

Top Post Ad

Click to join Samarasasudhi Official Whatsapp Group

Qries

ಕುಂಬಳೆ: ಹವಾಮಾನ ವೈಪರೀತ್ಯ ಸಹಿತ ವಿವಿಧ ಕಾರಣಗಳಿಂದ ಈ ಬಾರಿ ಬೇಸಿಗೆ ಮಳೆ ಸಹಿತ ವಾಯುಭಾರ ಕುಸಿತದ ಪರಿಣಾಮ ಆಗಾಗ ಮಳೆ ಬೀಳುತ್ತಿದ್ದು, ಸ್ಥಳೀಯಾಡಳಿತ ಸಂಸ್ಥೆಗಳು ಸಹಿತ ಆಡಳಿತ ಯಂತ್ರ ನಿಷ್ಕ್ರೀಯವಾಗಿದ್ದು ಜನರು ಆತಂಕ ಪಡುವಂತಾಗಿದೆ.

ಜಲಜೀವನ ಮಿಷನ್, ದೂರವಾಣಿ-ಮೊಬೈಲ್, ಕುಡಿಯುವ ನೀರು ಪೂರೈಕೆ ಮೊದಲಾದವುಗಳು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅವ್ಯವಸ್ಥೆಗಳು ಮುಂದಿನ ಮಳೆಗಾಲವನ್ನು ತೀವ್ರ ಸ್ವರೂಪದಲ್ಲಿ ಅಲ್ಲೋಲ ಕಲ್ಲೋಲಗೊಳಿಸುವ ಅತಂತ್ರತೆಗಳು ಭವಿಷ್ಯವನ್ನು ಕರಾಳಗೊಳಿಸುವ ಸೂಚನೆ ಕಂಡುಬಂದಿದೆ.


ಅಂತರ್ ರಾಜ್ಯ ಸಂಪರ್ಕದ ಹೆದ್ದಾರಿ, ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಇತರ ರಸ್ತೆಗಳ ದಾರಿ ತಪ್ಪಿದ ಒಳಚರಂಡಿ ವ್ಯವಸ್ಥೆಗಳು, ಕೋಟಿ ಸೊಳ್ಳೆಗಳ ಹುಟ್ಟಿಗೆ ಕಾರಣವಾಗುವ ತ್ಯಾಜ್ಯ ನಿರ್ವಹಣೆಯ ಅನಾಸಕ್ತಿಯ ಕಾರಣ ಮುಂಗಾರು ಕಾಲದಲ್ಲಿ ಸಾಕಷ್ಟು ತೊಂದರೆ ಸೃಷ್ಟಿಸಲಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಪೂರೈಕೆ(ಜಲ ಜೀವನ ಮಿಷನ್ ಸಹಿತ ಇತರ ಯೋಜನೆಗಳು) ಹಾಗೂ ದೂರವಾಣ Âಕೇಬಲ್ ಅಳವಡಿಕೆ ನೆಪದಲ್ಲಿ ವ್ಯಾಪಕವಾಗಿ ರಸ್ತೆ ಅಂಚನ್ನು ಅಗೆಯಲಾಗುತ್ತಿದ್ದು, ಇದನ್ನು ಸಮರ್ಪಕವಾಗಿ ಮುಚ್ಚದಿರುವುದರಿಂದ ಸಮಸ್ಯೆ ಎದುರಾಗಲಿದೆ. 

ಶುಚಿತ್ವ ಕೇರಳ ಯೋಜನೆಯನ್ವಯ ಸರ್ಕಾರ ಕಳೆದ ಮಾರ್ಚ್ ತಿಂಗಳು ಒಮದು ತಿಂಗಳು ಪೂರ್ತಿ ಸ್ವಚ್ಚತಾ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಕೈಗೊಂಡಿತ್ತಾದರೂ ನಾಯಿಯ ಬಾಲಕ್ಕೆ ನಳಿಕೆ ಹಾಕಿ ನೇರಗೊಳಿಸುವ ಯತ್ನದಂತೆ ಸ್ವಚ್ಛಗೊಳಿಸುತ್ತಾ ಹೋದಂತೆ ಅದರ ಹಿಂದೆಯೇ ಮತ್ತೆ ತ್ಯಾಜ್ಯಗಳು ವ್ಯಾಪಕ ಪ್ರಮಾಣದಲ್ಲಿ ಮತ್ತೆ ತುಂಬಿಕೊಂಡು ನಗುತ್ತಿರುವಂತಿದೆ.


ರಾ.ಹೆದ್ದಾರಿ ಸಾಗುವ ಗಡಿ ಗ್ರಾಮ ಪಂಚಾಯತಿಗಳಾದ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ, ಸಹಿತ ಒಳ ನಾಡುಗಳಾದ ಪೈವಳಿಕೆ, ಮೀಂಜ, ವರ್ಕಾಡಿ, ಎಣ್ಮಕಜೆ, ಬದಿಯಡ್ಕ, ದೇಲಂಪಾಡಿ, ಕಾರಡ್ಕ, ಮಧೂರು, ಕುಂಬ್ಡಾಜೆ, ಪುತ್ತಿಗೆ ಮೊದಲಾದೆಡೆ ಏಪ್ರಿಲ್ ತಿಂಗಳು ಮಧ್ಯ ಕಾಲವಾದರೂ ಈವರೆಗೆ ಮಳೆಗಾಲ ಪೂರ್ವ ಯಾವುದೇ ಕಾರ್ಯಯೋಜನೆಗಳು ಚರ್ಚಿತವಾಗಿಲ್ಲ. ಸಾಮಾನ್ಯವಾಗಿ ಸರ್ಕಾರಿ ನಿಯಮದಂತೆ ಇವೆಲ್ಲದರ ಬಗ್ಗೆ ಅವಲೋಕನ-ಚರ್ಚೆಗಳು ಮೇ ತಿಂಗಳಾಂತ್ಯದ ವಾರಗಳಲ್ಲಿ ನಡೆಸುವುದು ವಾಡಿಕೆಯಾಗಿದ್ದು, ಅಷ್ಟರಲ್ಲಿ ಮುಂಗಾರು ಪ್ರವೇಶಿಸಿ ಅದಾಗಲೇ ಅವ್ಯವಸ್ಥೆಗಳು ತಾಂಡವವಾಡತೊಡಗಿ ಜನರು ಒಂದಷ್ಟು ಹೈರಾಣರಾಗಿ ಇನ್ನೇನು ತಲೆ ಎತ್ತಬೇಕೆನ್ನುವಾಗ ಮಳೆಗಾಲ ಮುಗಿದು ಒಟ್ಟು ವ್ಯವಸ್ಥೆಗಳು ತನ್ನಿಂದ ತಾನೆ ತಹಬದಿಗೆ ಬರುತ್ತವೆ. ಈ ವೇಳೆ ಸಂಕಷ್ಟ-ಕಣ್ಣೀರಿಗೊಳಗಾದ ಅದೆಷ್ಟೋ ಕುಟುಂಬಗಳು ತಪ್ಪಿದ ಹಾದಿಯಿಂದ ಮತ್ತೆ ಹಳಿಗೇರಲು ಯತ್ನಿಸಿ ಸೋತು ಸುಣ್ಣವಾಗಿರುತ್ತಾರೆ.


ಮಂಜೇಶ್ವರ, ಕಾಸರಗೋಡು ತಾಲೂಕು ವ್ಯಾಪ್ತಿಯ ಬಹುತೇಕ ಕಡೆ ಒಳಚರಂಡಿಗೆ ಅಳವಡಿಸಿರುವ ಸ್ಲ್ಯಾಬ್ ಕುಸಿದಿರುವ ಸ್ಥಿತಿಯಲ್ಲಿದ್ದು, ಮಲಿನ ನೀರು ಹೊರಹರಿಯುತ್ತಿರುವುದು ಹಗಲಿನಷ್ಟು ಇರುಳೂ ಸತ್ಯ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ, ರಸ್ತೆಗೆ ನೀರು ಹರಿದು ರಸ್ತೆ ಹೊಳೆಯಂತಾಗುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಒಳಚರಂಡಿ ವ್ಯವಸ್ಥೆಯ ಒಟ್ಟು ಕ್ರಮಗಳೇ ಅರ್ಥವಾಗದ ಆಡಳಿತ ವ್ಯವಸ್ಥೆಗಳು ಅಸ್ತವ್ಯಸ್ಥಗೊಳಿಸಿರುವುದು ಕಾಲವನ್ನಷ್ಟೇ ಅಲ್ಲ, ಜನರ ಭವಿಷ್ಯವನ್ನೂ ಕೂಡ.

ಮಳೆಗಾಲ ಆರಂಭಗೊಳ್ಳಲಿದ್ದು, ಇದಕ್ಕೆ ಪೂರ್ವಭಾವಿ ತಯಾರಿಯನ್ನು ಯಾವುದೇ ಸ್ಥಳೀಯಾಡಳಿತ ಸಂಸ್ಥೆಗಳು ಈವರೆಗೂ ಕೈಗೊಂಡಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ಸಭೆ ಆಯೋಜಿಸಿ ಮಳೆಗಾಲ ಪೂರ್ವಭಾವಿ ತಯಾರಿಯ ಬಗ್ಗೆ ಮಾಹಿತಿ ನೀಡಬೇಕಾದ ಜಿಲ್ಲಾಡಳಿತವೂ ಸುಮ್ಮನಾಗಿದೆ. ಮುಖ್ಯವಾಗಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಂಕ್ರಾಮಿಕ ರೋಗಗಳೂ ತಲೆಯೆತ್ತುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಈವರೆಗೂ ಮುಂದಾಗಿಲ್ಲ. 

ರಾಕ್ಷಸನಾದ ರಾ.ಹೆದ್ದಾರಿ:

ಬಹು ಆಯಾಮಗಳಿಂದ ದಶಕಗಳಿಂದ ನಡೆಯುತ್ತಿರುವ ರಾ.ಹೆದ್ದಾರಿ ಕಾಮಗಾರಿ ಬಹುಮುಖಿ ಸಮಸ್ಯೆಗಳನ್ನು ತಂದೊಡ್ಡಿರುವುದು ಅನಿರೀಕ್ಷಿತ. ಹೆದ್ದಾರಿಯೊಳಗಿಂದ ಕೆಳಗಿನ ಸರ್ವೀಸ್ ರಸ್ತೆಗೆ ಧುಮುಕುವ ನೀರು ಅಲ್ಲಿನ ಮಾಲಿನ್ಯಗಳೊಂದಿಗೆ ಚರಂಡಿ ವ್ಯವಸ್ಥೆಗಳಿಲ್ಲದೆ ಎಲ್ಲಿಗೆ ಹರಿಯಲಿದೆ ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿ ಜನರ ಮುಂದಿದೆ. ಕರಂದಕ್ಕಾಡು, ಎರಿಯಾಲ್, ಮೊಗ್ರಾಲ್, ಮೊಗ್ರಾಲ್ ಪುತ್ತೂರು, ಕುಂಬಳೆ, ಬಂದ್ಯೋಡು, ನಯಾಬಝಾರ್, ಉಪ್ಪಳ, ಹೊಸಂಗಡಿ, ಮಂಜೇಶ್ವರ, ಕುಂಜತ್ತೂರು, ತೂಮಿನಾಡು ಮೊದಲಾದೆಡೆಗಳ ಸರ್ವೀಸ್ ರಸ್ತೆಗಳು ಪೂರ್ಣ ಮಾಲಿನ್ಯಗಳ ಕೇಂದ್ರವಾಗಿದ್ದು, ಇದರೊಂದಿಗೆ ಮಳೆನೀರು ಸೇರಿ ಸಾಂಕ್ರಾಮಿಕ ಖಾಯಿಲೆಗಳು ಬಂದೆರಗುವುದರಲ್ಲಿ ಸಂಶಯಗಳು ಲವದಷ್ಟೂ ಇಲ್ಲ. ಈ ಪೈಕಿ ಮಂಗಲ್ಪಾಡಿ ಗ್ರಾಮ ಪಂಚಾಯತಿಯ ಉಪ್ಪಳ ಪೇಟೆ ಅತ್ಯಂತ ಹೆಚ್ಚು ಜನನಿಬಿಡ ಪ್ರದೇಶವಾಗಿದ್ದು, ಕೈಕಂಬದಿಂದ ಉಪ್ಪಳ ಗೇಟ್ ವರೆಗಿನ ಹೆದ್ದಾರಿ ಬದಿಯ ಮಾಲಿನ್ಯ ನಿಕ್ಷೇಪ ಈಗಲೇ ಮೂಗುಮುಚ್ಚಿ ಹೋಗುವಂತಿದ್ದು, ಆಡಳಿತ ವರ್ಗ ಕೈಗೊಳ್ಳುವ ನಿಯಂತ್ರಣ ಚಟುವಟಿಕೆಗಳು ಸೋಲುತ್ತಿರುವುದು ಕಳವಳ ಉಂಟುಮಾಡಿದೆ. 

ಜನರ ಸಹಭಾಗಿತ್ವದ ಕೊರತೆ:

ಸರ್ಕಾರ ಮಟ್ಟದಲ್ಲಿ ಸ್ವಚ್ಛ ಭಾರತ್ ಮಿಷನ್ ಚಟುವಟಿಕೆಗಳು, ನವಕೇರಳ ಸ್ವಚ್ಛತಾ ಮಿಷನ್, ಬೀಚ್ ಕ್ಲೀನ್ ಪ್ರಾಜೆಕ್ಟ್ ಗಳೇ ಮೊದಲಾದವುಗಳು ನಿತ್ಯ ನಿರಂತರವಾಗಿ ನಡೆಯುತ್ತಿದ್ದರೂ, ಸಾರ್ವಜನಿಕರ ಸಹಭಾಗಿತ್ವದ ಕೊರತೆ ಮುಖ್ಯವಾಗಿ ಎದ್ದು ಕಾಣುತ್ತಿದೆ. ಸರ್ಕಾರಿ ವ್ಯವಸ್ಥೆಗಳು ಒಂದೆಡೆ ಯೋಜನೆಗಳನ್ನು ಮುನ್ನಡೆಸುತ್ತಿದ್ದರೂ, ಜನರು ಮತ್ತೆ ಮತ್ತೆ ಅವಜ್ಞೆಯಿಂದ ವರ್ತಿಸುತ್ತಿದ್ದು, ಪ್ಲಾಸ್ಟಿಕ್, ಮಾಂಸಗಳ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಹೋಟೆಲ್ ಸಹಿತ ವ್ಯಾಪಾರ ಕೇಂದ್ರಗಳ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಗೆ ಆಯಾ ವಲಯದ ಮಾಲಕರಿಗೆ ಇನ್ನೂ ಅರಿವು ಬಂದಂತಿಲ್ಲ.  

ಹಾದಿ ತಪ್ಪಿತೇ ಹಸಿರು ಕ್ರಿಯಾ ಸೇನೆ:

ಕಳೆದ ಎರಡು ವರ್ಷಗಳಿಂದ ಮನೆಮನೆಗಳಿಂದ ತ್ಯಾಜ್ಯಗಳನ್ನು ತಿಂಗಳಿಗೊಮ್ಮೆ ಶೇಖರಿಸುತ್ತಿರುವ ಹಸಿರು ಕ್ರಿಯಾ ಸೇನೆ ಬಹುತೇಕ ದಾರಿ ತಪ್ಪಿರುವುದು ಕಂಡುಬರುತ್ತಿದೆ. ಮನೆಮನೆಗಳಲ್ಲಿ ಪ್ಲಾಸ್ಟಿಕ್, ಗಾಜು, ಪೇಪರ್ ಗಳೇ ಸಹಿತವಾದ ತ್ಯಾಜ್ಯಗಳನ್ನು ಶೇಖರಿಸುವುದಲ್ಲದೆ ಒಂದು ಮನೆಯಿಂದ 50 ರೂ>ಗಳನ್ನೂ ಇದಕ್ಕಾಗಿ ಪಡೆಯಲಾಗುತ್ತದೆ. ಆದರೆ ಹೆಚ್ಚಿನ ಪ್ರದೇಶಗಳ ಕಾರ್ಯಕರ್ತರು ಹಣವನ್ನು ಮಾತ್ರ ಪಡೆಯುಇತ್ತಿದ್ದು, ತ್ಯಾಜ್ಯಗಳನ್ನು ಬಿಟ್ಟು ತೆರಳುತ್ತಿದ್ದಾರೆ. ಸಂಗ್ರಹಿಸಿದ ತ್ಯಾಜ್ಯ ವಿಲೇವಾರಿ ಹೇಗೆಂಬುದರ ಬಗೆಗೆ ಸ್ಪಷ್ಟತೆಗಳಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.   

ಮುಖ್ಯವಾಗಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಂಕ್ರಾಮಿಕ ರೋಗಗಳೂ ತಲೆಯೆತ್ತುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಇನ್ನಾದರೂ ಮುಂದಾಗಬೇಕು.


ಅಭಿಮತಗಳು: ಈ ಬಗ್ಗೆ ವಿಜಯವಾಣಿ ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವಿನೊ ಮೊಂತೆರೋ, ಕುಂಬಳೆ ಗ್ರಾ.ಪಂ.ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಹಾಗೂ ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್.ಅವರನ್ನು ಸಂಪರ್ಕಿಸಿದಾಗ ಮೇ ತಿಂಗಳಲ್ಲಿ ಸೂಕ್ತ ಯೋಜನೆ ಕೈಗೊಳ್ಳುವುದಾಗಿ ಪ್ರತಿಕ್ರಿಸಿದರು.

ಈ ಪೈಕಿ ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷರು ಪ್ರತಿಕ್ರಿಯಿಸಿ ಮಾಲಿನ್ಯ ನಿಯಂತ್ರಣದಲ್ಲಿ ಸ್ಥಳೀಯಾಡಳಿತ ಸಂಸ್ಥೆ ನಿರಂತರ ಕಾರ್ಯೋನ್ಮುಖವಾಗಿದ್ದು, ಜನರು ಮತ್ತೆ ಮತ್ತೆ ಅಸಹಕಾರ ತೋರುತ್ತಿರುವ ಬಗ್ಗೆ ಬೇಸರ ತೋಡಿಕೊಂಡರು. ಅಲ್ಲದೆ ಮಂಜೇಶ್ವರ ವ್ಯಾಪ್ತಿಯ ಮಂಜೇಶ್ವರ, ಕಣ್ವತೀರ್ಥ ಬೀಚ್ ಗಳಲ್ಲಿ ಕೈಗೊಂಡ ಸ್ವಚ್ಚತಾ ಅಭಿಯಾನದ ಬಗ್ಗೆ ತಿಳಿಸಿ, ಬೀಚ್ ಸ್ವಚ್ಚತೆಗೆ ಜನರು ಹೆಚ್ಚು ಗಮನಿಸಬೇಕು ಎಂದು ಕಳಕಳಿಯಿಂದ ತಿಳಿಸಿದರು. 


ಕುಂಬಳೆ ಗ್ರಾ.ಪಂ.ಉಪಾಧ್ಯಕ್ಷ ನಾಸರ್ ಮೊಗ್ರಾಲ್ ಅವರು ಪ್ರತಿಕ್ರಿಯಿಸಿ, ಈಗಾಗಲೇ ತಲಾ 10 ಸಾವಿರ ರೂ.ºಗಳನ್ನು ಗ್ರಾ.ಪಂ.ಯ ಪ್ರತಿ ವಾರ್ಡ್‍ನ ಶುಚಿತ್ವಕ್ಕಾಗಿ ನೀಡಲಾಗಿದೆ ಎಮದಿರುವರು. ಆದರೆ, ಅದರ ಬಳಿಕದ ಕಾರ್ಯಚಟುವಟಿಕೆಗಳ ಬಗ್ಗೆ ಅವರು ಉತ್ತರಿಸದಾದರು. 

ಚಿತ್ರಗಳು: 1.)ಮಂಜೇಶ್ವರ ರಾ.ಹೆದ್ದಾರಿ ಬದಿಯ ತ್ಯಾಜ್ಯ,2)(3)ನೀರ್ಚಾಲು ಸಮೀಪ ಕಂಡುಬರುವ ತ್ಯಾಜ್ಯ ಶೇಖರಣಾ ಘಟಕ,4)ತ್ಯಾಜ್ಯ ಶೇಖರಣಾ ಘಟಕದ ಹೊರತೆ ಎಸೆದಿರುವ ಮಾಲಿನ್ಯ.)


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries