ಮಧೂರು : ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಮೂಡಪ್ಪ ಸೇವಾ ಸಂಭ್ರಮದ ಮಧ್ಯೆ ಶನಿವಾರ ಸುರಿದ ಮಳೆಯಿಂದ ಭಕ್ತಾದಿಗಳಿಗೆ ಒಂದಷ್ಟು ಸಮಸ್ಯೆ ಉಂಟಾಗಿದ್ದರೂ, ದೇವಾಲಯದೊಳಗೆ ನಿಗದಿಪಡಿಸಲಾಗಿದ್ದ ವೈದಿಕ ಕಾರ್ಯಕ್ರಮಗಳಿಗೆ ಯಾವುದೇ ತೊಡಕುಂಟಾಗಿರಲಿಲ್ಲ. ಮೂಡಪ್ಪಸೇವಾ ಮಹೋತ್ಸವದ ಹೊಣೆ ಹೊತ್ತಿದ್ದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಅರಿಕೊಟ್ಟಿಗೆ ಮುಹೂರ್ತ ನಡೆದು, ಅಪ್ಪ ತಯಾರಿ, 128ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಿರಾತಂಕವಾಗಿ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕಾಗಿ ಬಂದಿದ್ದರೂ, ಮಾ.27ರಂದು ಆರಂಭಗೊಂಡಿದ್ದ ಅಖಂಡ ಭಜನಾ ಸಂಕೀರ್ತನೆ ಯಥಾ ಪ್ರಕಾರ ಮುಂದುವರಿದಿತ್ತು. ಅಖಂಡ ಭಜನಾ ಸಂಕೀರ್ತನೆಯಲ್ಲಿ 480ಕ್ಕೂ ಹೆಚ್ಚು ತಂಡಗಳು ನೋಂದಾವಣೆ ನಡೆಸಿದ್ದು, ಪ್ರತಿ ತಂಡಕ್ಕೆ 45ನಿಮಿಷ ನಿಗದಿಪಡಿಸಲಾಗಿದೆ. ಏ. 7ರಂದು ಭಜನೆ ಸಂಪನ್ನಗೊಳ್ಳಲಿದೆ.