ಢಾಕಾ: ನಿವೇಶನವೊಂದನ್ನು ಅಕ್ರಮವಾಗಿ ಪಡೆದ ಆರೋಪದ ಮೇಲೆ ಬಾಂಗ್ಲಾದೇಶದ ಪದಚ್ಯುತ ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಮಗಳು ಸೈಮಾ ವಾಜಿದ್ ಪುತುಲ್ ಹಾಗೂ ಇತರೆ 17 ಮಂದಿ ವಿರುದ್ಧ ಇಲ್ಲಿನ ನ್ಯಾಯಾಲಯವು ಗುರುವಾರ ಹೊಸತಾಗಿ ಬಂಧನ ವಾರಂಟ್ ಹೊರಡಿಸಿದೆ.
ಭ್ರಷ್ಟಾಚಾರ ನಿಗ್ರಹ ಆಯೋಗ (ಎಸಿಸಿ) ಸಲ್ಲಿಸಿದ್ದ ದೋಷಾರೋಪ ಪಟ್ಟಿ ಸ್ವೀಕರಿಸಿ ಢಾಕಾದ ಮೆಟ್ರೊಪಾಲಿಟನ್‌ನ ಹಿರಿಯ ವಿಶೇಷ ನ್ಯಾಯಾಧೀಶ ಝಾಕೀರ್ ಹೊಸೈನ್ ಗಾಲಿಬ್ ಅವರು ಈ ಆದೇಶ ಪ್ರಕಟಿಸಿದರು.
'ಆರೋಪಿಗಳೆಲ್ಲರೂ ನಾಪತ್ತೆಯಾಗಿದ್ದು, ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿದೆ' ಎಂದು ಎಸಿಸಿ ಪರ ಪ್ರಾಸಿಕ್ಯೂಟರ್ ಮಿರ್ ಅಹಮ್ಮದ್ ಸಲಾಂ ತಿಳಿಸಿದರು.
2025ರ ಜ.12ರಂದು ಹಸೀನಾ ಹಾಗೂ 17 ಮಂದಿ ವಿರುದ್ಧ ಎಸಿಸಿ ನ್ಯಾಯಾಲಯವು ಪ್ರಕರಣ ದಾಖಲಿಸಿತ್ತು. ಇದರಲ್ಲಿ ಹಸೀನಾ ಕುಟುಂಬಸ್ಥರು ಹೊರತುಪಡಿಸಿದರೆ, ಉಳಿದವರೆಲ್ಲರೂ ಸರ್ಕಾರಿ ನೌಕರರಾಗಿದ್ದಾರೆ.
ರಾಜಧಾನಿ ಢಾಕಾದ ಹೊರವಲಯದಲ್ಲಿರುವ ಪೂರ್ವಾಚಲದಲ್ಲಿ ಸರ್ಕಾರಿ ಸ್ವಾಮ್ಯದ 'ರಾಜಧಾನಿ ಉನ್ಯಾನ್ ಕತ್ರಿಪಕ್ಕ'(ರಾಜುಕೆ)ಕ್ಕೆ ಸೇರಿದ ಭೂಮಿಯ ಭಾಗವೊಂದನ್ನು 17 ಮಂದಿಯೂ ಅಕ್ರಮವಾಗಿ ಪಡೆದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ವಿಸ್ತೃತ ತನಿಖೆ ನಡೆಸಿ, ಮೇ 4ರ ಒಳಗಾಗಿ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ಎಸಿಸಿಗೆ ಸೂಚನೆ ನೀಡಿದ್ದಾರೆ.