ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಠುವಾ ಜಿಲ್ಲೆಯಲ್ಲಿ ಮೂವರು ಶಂಕಿತ ಉಗ್ರರ ಚಲನವಲನ ಕಂಡುಬಂದಿದ್ದು, ಸೇನೆಯು ಪತ್ತೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಶಂಕಿತರು, ಕಠುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಾರ್ಚ್ 27ರಂದು ನಡೆದ ಗುಂಡಿನ ಚಕಮಕಿಯಲ್ಲಿ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ.
'ಕಠುವಾ ಜಿಲ್ಲೆಯ ರೂಯಿ ಗ್ರಾಮದ ಮನೆಯೊಂದಕ್ಕೆ ಭಾನುವಾರ ರಾತ್ರಿ ನುಗ್ಗಿರುವ ಶಂಕಿತರು, ಆಹಾರ ತಿನಿಸುಗಳನ್ನು ಹೊತ್ತೊಯ್ದಿದ್ದಾರೆ. ಅವರ ಪತ್ತೆಗೆ ಸೇನೆ, ಪೊಲೀಸ್, ಎನ್‌ಎಸ್‌ಜಿ, ಸಿಪಿಆರ್‌ಎಫ್ ಹಾಗೂ ಬಿಎಸ್‌ಎಫ್ ಯೋಧರನ್ನೊಳಗೊಂಡ ಜಂಟಿ ಕಾರ್ಯಾಚರಣೆಯನ್ನು ಸೋಮವಾರ ಆರಂಭಿಸಲಾಗಿದೆ. ವೈಮಾನಿಕ ಕಣ್ಗಾವಲು ಇಡಲಾಗಿದ್ದು, ಶ್ವಾನಪಡೆಯನ್ನೂ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರಿಗೆ ವಸತಿ, ಆಹಾರ ಮತ್ತು ಇತರೆ ನೆರವು ನೀಡಿದ ಆರೋಪದ ಮೇಲೆ, ಮಹಿಳೆಯರೂ ಸೇರಿ ಒಂದೇ ಕುಟುಂಬದ 6 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಕಠುವಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಾರ್ಚ್ 27ರಂದು ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ನಾಲ್ವರು ಪೊಲೀಸರು ಹುತಾತ್ಮರಾಗಿದ್ದರು.