ಧರ್ಮಶಾಲಾ: 'ನಾನು ಜವಾಬ್ದಾರಿಯುತ ಹುದ್ದೆಯಲ್ಲಿದ್ದೇನೆ. ಹಾಗಾಗಿ ಹಿಮಾಚಲ ಪ್ರದೇಶದ ರಾಜ್ಯ ರಾಜಕಾರಣಕ್ಕೆ ಮರಳುವ ಸಾಧ್ಯತೆ ಇಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿದ್ದಾರೆ.
ನಡ್ಡಾ ಅವರ ಉತ್ತರಾಧಿಕಾರಿಯನ್ನು ಬಿಜೆಪಿ ಶೀಘ್ರದಲ್ಲೇ ಆಯ್ಕೆ ಮಾಡುವ ಸಾಧ್ಯತೆಯಿದೆ.
ಈ ನಡುವೆ ರಾಜ್ಯ ರಾಜಕಾರಣಕ್ಕೆ ಮರಳುವ ಸಾಧ್ಯತೆಯನ್ನು ನಡ್ಡಾ ತಳ್ಳಿ ಹಾಕಿದ್ದಾರೆ.
2020ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನಡ್ಡಾ ಆಯ್ಕೆಯಾಗಿದ್ದರು.
ಮುಂಬರುವ ದಿನಗಳಲ್ಲಿ ಹಿಮಾಚಲ ಸೇರಿದಂತೆ ಹಲವು ರಾಜ್ಯ ಘಟಕಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ರಾಜ್ಯ ಘಟಕಗಳ ಅಧ್ಯಕ್ಷರ ನೇಮಕದ ಬಳಿಕ ನಡ್ಡಾ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ ದೇಶದ ಕಾಂಗ್ರೆಸ್ ಸರ್ಕಾರಗಳ ಪೈಕಿ ಹಿಮಾಚಲ ಪ್ರದೇಶ ಅತ್ಯಂತ ಭ್ರಷ್ಟವಾಗಿದೆ ಎಂದು ನಡ್ಡಾ ಆರೋಪಿಸಿದ್ದಾರೆ.
'ಕೇಂದ್ರದಿಂದ ಅನುದಾನ ಸಿಕ್ಕಿಲ್ಲ ಎಂದು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ನಿಮಗೆ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ. ನಿಮ್ಮ ತಪ್ಪಿಗಾಗಿ ಬೇರೆಯವರನ್ನು ದೂಷಿಸದಿರಿ' ಎಂದು ನಡ್ಡಾ ಹೇಳಿದ್ದಾರೆ.