ಕಾಸರಗೋಡು: ಅದು ಪ್ರಾಥಮಿಕ ಶಾಲೆ. ಅಲ್ಲಿ ಸರ್ಕಾರಿ ಇಲಾಖಾ ಪರೀಕ್ಷೆ ನಡೆಯಬೇಕಿತ್ತು, ಇನ್ನೇನು ಪರೀಕ್ಷೆಯ ಬೆಲ್ ಆಗಬೇಕು ಎನ್ನುವಾಗ ಎಲ್ಲಿಂದಲೂ ಹಾರಿ ಬಂದ ಹದ್ದೊಂದು ವಿದ್ಯಾರ್ಥಿಯ ಹಾಲ್ ಟಿಕೆಟ್ ಹಿಡಿದು ಹಾರಿದೆ.. ಇದು ಯಾವುದೋ ಸಿನಿಮಾ ದೃಶ್ಯವಲ್ಲ.ಇದು ಕಾಸರಗೋಡಿನಲ್ಲಿ ನಡೆದ ಘಟನೆ.
ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ, ಇಲಾಖಾ ಪರೀಕ್ಷೆ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಹದ್ದು ಹಾರಿ ಬಂದು ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ ಅನ್ನು ಕಸಿದುಕೊಂಡಿದೆ. ಬೆಳಿಗ್ಗೆ 7.30 ಕ್ಕೆ ನಿಗದಿಯಾಗಿದ್ದ ಪರೀಕ್ಷೆಯ ಗಂಟೆ ಬಾರಿಸುವ ಮುನ್ನ ನಡೆದ ಈ ಘಟನೆಯು ಅಭ್ಯರ್ಥಿಗಳು ಮತ್ತು ನೋಡುಗರನ್ನು ದಿಗ್ಭ್ರಮೆಗೊಳಿಸಿತು.
ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಲು ಸುಮಾರು 300 ಇತರ ವಿದ್ಯಾರ್ಥಿಗಳೊಂದಿಗೆ ಬೇಗನೆ ಬಂದಿದ್ದರು. ಹಾಲ್ ಟಿಕೆಟ್ ಕಸಿದುಕೊಂಡ ಹದ್ದು ಶಾಲೆಯ ಮೇಲಿನ ಮಹಡಿಯ ಕಿಟಕಿಯ ಅಂಚಿನಲ್ಲಿ ಶಾಂತವಾಗಿ ಕುಳಿತಿತ್ತು. ಕಾಗದವನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಸೇರಿದ್ದ ಜನರನ್ನು ನೋಡುತ್ತಿತ್ತು.
ಗದ್ದಲ ಮತ್ತು ಕೆಳಗೆ ಜನಸಂದಣಿ ಸೇರಿದ್ದರೂ, ಹದ್ದು ಯಾವುದೇ ಆತಂಕವಿಲ್ಲದೆ ಕೆಲವು ನಿಮಿಷಗಳ ಕಾಲ ಹಾಲ್ ಟಿಕೆಟ್ ಹಿಡಿದುಕೊಂಡು ಕುಳಿತಿತ್ತು. ಕೊನೆಗೆ ಕೆಳಕ್ಕೆ ಹಾಕಿದೆ. ಸೆರೆಹಿಡಿಯಲಾದ ವೀಡಿಯೊದಲ್ಲಿ ಈ ವಿಚಿತ್ರ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇಷ್ಟೆಲ್ಲಾ ಪ್ರಹಸನದ ಬಳಿಕ ವಿದ್ಯಾರ್ಥಿ ಪರೀಕ್ಷೆ ಬರೆದರು. ಅವರಿಗೆ ಬಳಿಕ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ವ್ಯವಸ್ಥೆ ಮಾಡಿದರು.