ನ್ಯೂಯಾರ್ಕ್: ಪದವಿ ಶಿಕ್ಷಣ ಪೂರ್ಣಗೊಳ್ಳುವುದಕ್ಕೆ ಕೆಲವೇ ವಾರಗಳು ಬಾಕಿ ಇರುವಾಗ 21 ವರ್ಷದ ಭಾರತದ ವಿದ್ಯಾರ್ಥಿಯ ವಿಸಾ ರದ್ದು ಮಾಡಿ ಗಡೀಪಾರು ಮಾಡುವ ಟ್ರಂಪ್ ಆಡಳಿತದ ನಿರ್ಧಾರಕ್ಕೆ ಫೆಡರಲ್ ಕೋರ್ಟ್ ತಡೆ ನೀಡಿದೆ.
ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ವಿದ್ಯಾರ್ಥಿ ಕ್ರಿಶ್ ಲಾಲ್ ಇಸ್ಸೆರ್ದಾಸನಿಯವರ ಗಡೀಪಾರಿಗೆ ಕೋರ್ಟ್ ತಡೆ ನೀಡಿದೆ.
ಸರ್ಕಾರದ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಕ್ರಮದ (SEVIS) ದತ್ತಾಂಶದಲ್ಲಿ ಇಸೆರ್ದಾಸನಿ ಅವರ ದಾಖಲೆಯನ್ನು ರದ್ದುಗೊಳಿಸಲಾಗಿತ್ತು. ಇದಕ್ಕೆ ತಾತ್ಕಾಲಿಕ ತಡೆ ನೀಡಬೇಕು ಎಂದು ವಕೀಲ ಶಬ್ನಮ್ ಲೊಟ್ಫಿ ಕೋರ್ಟ್ ಮೆಟ್ಟಿಲೇರಿದ್ದರು.
'SEVIS ನಲ್ಲಿ F-1 ವಿದ್ಯಾರ್ಥಿ ವಿಸಾ ದಾಖಲೆಯನ್ನು ರದ್ದುಗೊಳಿಸುವ ಮೊದಲು ಅವರಿಗೆ ಯಾವುದೇ ಎಚ್ಚರಿಕೆ ನೀಡಿಲ್ಲ. ಅಥವಾ ಸಮರ್ಥಿಸಿಕೊಳ್ಳಲು ಯಾವುದೇ ಅವಕಾಶ ನೀಡಲಿಲ್ಲ' ಎಂದು ತೀರ್ಪಿನ ವೇಳೆ ಕೋರ್ಟ್ ಹೇಳಿದೆ.
ಅಮೆರಿಕದ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಕಾರ್ಯಕ್ರಮ ಅಥವಾ ಇಂಗ್ಲಿಷ್ ಭಾಷಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ F1 ವೀಸಾವನ್ನು ನೀಡಲಾಗುತ್ತದೆ.
ಇಸ್ಸೆರ್ದಾಸನಿ ಮತ್ತು ಅವರ ಸ್ನೇಹಿತರು ಬಾರ್‌ನಿಂದ ಹೊರಬಂದು ಮತ್ತೊಂದು ಗುಂಪಿನ ಜನರೊಂದಿಗೆ ವಾಗ್ವಾದ ನಡೆಸಿದ್ದರು. ಈ ಸಂಬಂಧ 2024 ನವೆಂಬರ್ 22 ರಂದು ಅವರನ್ನು ಬಂಧಿಸಲಾಗಿತ್ತು.
ಈ ಪ್ರಕರಣದಲ್ಲಿ ಇಸ್ಸೆರ್ದಾಸನಿ ತಪ್ಪಿತಸ್ಥ ಎನ್ನುವುದು ಸಾಬೀತಾಗಿಲ್ಲ. ಶಿಕ್ಷೆಯೂ ಆಗಿಲ್ಲ. ಹೀಗಾಗಿ ಅವರ ವಿಸಾ ರದ್ದು ನಿರ್ಧಾರ ತಪ್ಪು ಎಂದ ನ್ಯಾಯಾಧೀಶರು ಏಪ್ರಿಲ್ 28ರವರೆಗೆ ತಡೆ ನೀಡಿದ್ದಾರೆ.