ಅವಲಕ್ಕಿಯನ್ನು ತಿನ್ನದವರಿಲ್ಲ. ಇದು ಪರಮಾತ್ಮ ಶ್ರೀಕೃಷ್ಣನಿಗೂ ಪ್ರೀಯ. ಇದನ್ನು ಚಪ್ಪಟೆಯಾದ ಅಕ್ಕಿ ಅಥವಾ ಪೋಹಾ (poha) ಎಂದೂ ಕರೆಯಲಾಗುತ್ತದೆ. ನೀವು ಇದರಿಂದ ಮಾಡುವ ಹಲವಾರು ಬಗೆಯ ಖಾದ್ಯಗಳನ್ನು ಮನಸಾರೆ ಸವಿದಿರಬಹುದು. ಆದರೆ ಇದು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ ಅನೇಕ ರೀತಿಯ ಆರೋಗ್ಯ (Health) ಪ್ರಯೋಜನಗಳನ್ನು ನೀಡುತ್ತದೆ.
ಹಾಗಾಗಿಯೇ ಇವುಗಳನ್ನು ಅನೇಕ ಮನೆ ಮದ್ದುಗಳಲ್ಲಿ ಬಳಕೆ ಮಾಡಲಾಗುತ್ತದೆ. ಅದಲ್ಲದೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಒಳ್ಳೆಯ ಆಹಾರವಾಗಿದೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಅವಲಕ್ಕಿಯಲ್ಲಿದೆ ಆರೋಗ್ಯ ಪ್ರಯೋಜನ:
- ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ಕಬ್ಬಿಣದ ಅಂಶಗಳು ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಇದರ ಸೇವನೆ ಮಾಡುವುದರಿಂದ ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ರಕ್ತಹೀನತೆಯನ್ನು ತಡೆಯಬಹುದು.
- ಅವಲಕ್ಕಿಯಲ್ಲಿರುವ ಫೈಬರ್ ಅಂಶವು ಕರುಳಿನ ಆರೋಗ್ಯವನ್ನು ಕಾಪಾಡಲು ಮತ್ತು ಮಲಬದ್ಧತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ಅವಲಕ್ಕಿಯ ಫೈಬರ್ ಅಂಶ ಹೆಚ್ಚಾಗಿದ್ದು ಕಡಿಮೆ ಕ್ಯಾಲೊರಿಗಳಿರುವುದರಿಂದ ಹೆಚ್ಚು ಸಮಯದ ವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ನಿಮಗೆ ಪದೇ ಪದೇ ಹಸಿವಾಗುವುದಿಲ್ಲ.
- ಅವಲಕ್ಕಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಈ ಆಹಾರವನ್ನು ಜೀರ್ಣಿಸಿಕೊಳ್ಳುವುದು ಕೂಡ ಸುಲಭವಾಗಿರುತ್ತದೆ.
ಅವಲಕ್ಕಿಯನ್ನು ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು;
- ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ಅವಲಕ್ಕಿಯನ್ನು ನೀರು ಅಥವಾ ಮಜ್ಜಿಗೆಯಲ್ಲಿ ನೆನೆಸಿಟ್ಟು ಆ ಬಳಿಕ ಉಪ್ಪು ಹಾಕಿ ಕುಡಿಯಬಹುದು.
- ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಲು ಅವಲಕ್ಕಿಯನ್ನು ಮೊಸರಿನೊಂದಿಗೆ ಬೆರೆಸಿ ಸೇವನೆ ಮಾಡಬಹುದು.
- ತ್ವರಿತ ಶಕ್ತಿ ಪಡೆಯಲು ಅವಲಕ್ಕಿ ಉಪ್ಮಾ ಅಥವಾ ಪೋಹಾ ಮಾಡಿ ಸೇವನೆ ಮಾಡಬಹುದು.
- ಪದೇ ಪದೇ ಕೆಮ್ಮು ಬರುತ್ತಿದ್ದರೆ ಅವಲಕ್ಕಿ ಮತ್ತು ಸಕ್ಕರೆ ಸೇರಿಸಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು. ಇದರಿಂದ ಕೆಮ್ಮು ಕಡಿಮೆಯಾಗುತ್ತದೆ.
- ಹೊಟ್ಟೆಯಲ್ಲಿ ಉರಿ ಜಾಸ್ತಿಯಾಗಿದ್ದಾರೆ ಅವಲಕ್ಕಿಯನ್ನು ಮೊಸರಿನ ಜೊತೆಗೆ ಸೇವನೆ ಮಾಡಿ. ನಿಮಗೆ ಬೇಕಾದಲ್ಲಿ ಅದಕ್ಕೆ ಉಪ್ಪು ಅಥವಾ ಸಕ್ಕರೆ ಸೇರಿಸಿಕೊಳ್ಳಬಹುದು.
ಅವಲಕ್ಕಿ ಬಳಸುವ ಮುನ್ನ ಈ ಸಲಹೆಗಳನ್ನು ಅನುಸರಿಸಿ
- ಹೆಚ್ಚಿನ ಫೈಬರ್ ಮತ್ತು ಪೋಷಕಾಂಶಗಳನ್ನು ಪಡೆಯಲು ಕೆಂಪು ಅವಲಕ್ಕಿಯನ್ನು ಆರಿಸಿಕೊಳ್ಳಿ.
- ಫೈಟಿಕ್ ಆಮ್ಲವನ್ನು ಕಡಿಮೆ ಮಾಡಲು ಅಡುಗೆ ಮಾಡುವ ಮೊದಲು ಅವಲಕ್ಕಿಯನ್ನು ನೆನೆಸಿಡಿ.