ಮಧೂರು: ಸನಾತನ ಧರ್ಮದ ಸಾರವನ್ನು ಕರಗತಮಾಡಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ನಡೆಸದಿದ್ದಲ್ಲಿ, ನಾವು ಮುಂದಿನ ಪೀಳಿಗೆಗೆ ಎಸಗುವ ಮಹಾ ಅಪರಾಧವಾಗಲಿದೆ ಎಂಬುದಾಗಿ ಕಾಸರಗೋಡು ಚಿನ್ಮಯಾ ಮಿಷನ್‍ನ ಪರಮಪೂಜ್ಯ ಬ್ರಹ್ಮಚಾರಿಣಿ ದಿಶಾ ಚೈತನ್ಯ ತಿಳಿಸಿದ್ದಾರೆ.
ಅವರು ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ- ಮೂಡಪ್ಪ ಸೇವೆಯ ಅಂಗವಾಗಿ ಶುಕ್ರವಾರ ಪ್ರಧಾನ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಖಂಡ ಭಾರತದ ಪರಿಕಲ್ಪನೆ ಸಾಕ್ಷಾತ್ಕಾರಗೊಳ್ಳಲು ಸನಾತನ ಧರ್ಮದ ತತ್ವ, ಮೌಲ್ಯ ಪಾಲಿಸುವುದು ಅನಿವಾರ್ಯ. ತತ್ವ-ಚಿಂತನೆ, ಆಚಾರಾನುಷ್ಠಾನಗಳಿಲ್ಲದ ಧರ್ಮ ಪಾಲನೆ ಪರಿಪೂರ್ಣವಾಗದು ಎಂದು ತಿಳಿಸಿದರು. ಸನಾತನ ಧರ್ಮದಲ್ಲಿ ಪ್ರಕೃತಿ ಪೂಜೆಗೆ ಹೆಚ್ಚಿನ ಮಹತ್ವ ಕಲ್ಪಿಸಿರುವುದರಿಂದ ಇಂದಿಗೂ ಕೂಡ ನೀರು, ಮರಗಳನ್ನು ಪೂಜಿಸುವ ಸಂಪ್ರದಾಯ ಬೆಳೆದುಬಂದಿದೆ. ಪ್ರಕೃತಿಯ ಆರಾಧನೆ ಎಂದಿಗೂ ಅಂಧ ವಿಶ್ವಾಸವಲ್ಲ.ಪ್ರಕೃತಿಯ ನಾಶ ಮಾನವ ಸಂಕುಲಕ್ಕೆ ವಿನಾಶಕಾರಿಯಾಗತೊಡಗಿದೆ. ಸನಾತನ ಧರ್ಮ ಬೋಧನೆಯ ಕೊರತೆಯಿಂದ ಇಂದು ಬಹಳಷ್ಟು ಮಂದಿ ಮುಖ್ಯ ಧಾರೆಯಿಂದ ವಿಮುಖರಾಗುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವಾಲಯಗಳ ಪಾವಿತ್ರ್ಯತೆ ಕಾಪಾಡುವುದರ ಜತೆಗೆ ತಮ್ಮ ಮನಸ್ಸಿನ ಕೊಳೆ ಶುದ್ಧಿಗೊಳಿಸಬೇಕು. ಇಂದು ಮಧೂರು ಕ್ಷೇತ್ರ ಜಗತ್ತಿಗೆ ಧಾರ್ಮಿಕ ಸಂದೇಶ ಸಾರುವ ಶ್ರದ್ಧಾ ಕೇಂದ್ರವಾಗಿ ಬೆಳೆದು ನಿಂತಿದ್ದು, ಇದರ ಹಿಂದೆ ಸಾವಿರಾರು ಮಂದಿ ಕಾರ್ಯಕರ್ತರ ಪರಿಶ್ರಮ ಅಡಕವಾಗಿದೆ ಎಂದು ತಿಳಿಸಿದರು.
ಇರಾಬಾಳಿಕೆ ಸತೀಶ್ ಕುಮಾರ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ಯಾಂಕ್ ನಿರ್ದೇಶಕ ಜಸ್ಟಿಸ್ ಚಂದ್ರಶೇಖರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಟ್ಲ ಬದಿಮನೆ ಪದ್ಮನಯನಾ ಸುಂದರ್‍ನಾಯ್ಕ್, ರಾಧಾಕೃಷ್ಣ ನಾಯ್ಕ್ ವಿಟ್ಲ, ಕಾಸರಗೋಡು ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ರಾಜಕೀಯ ಮುಖಂಡ ಎಂ.ಬಿ ಸದಾಶಿವ, ಪ್ರಗತಿಪರ ಕೃಷಿಕ ಮಾರಪ್ಪ ಶೆಟ್ಟಿ ಪುಣಚ, ಹೋಟೆಲ್ ಉದ್ಯಮಿ ಕೃಷ್ಣ ಶೆಟ್ಟಿ ಮುಂಬೈ, ಉಮಾ ಶೆಟ್ಟಿ ಮುಂಬೈ, ಎಸ್.ಬಿ ಜಯರಾಮ ರೈ ಬಳಂಜ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಟ್ರಸ್ಟಿ ಹರಿಣಿಸದಾಶಿವ ಉಪಸ್ಥಿತರಿದ್ದರು. ಡಾ. ರವಿಪ್ರಸಾದ್ ಬೆಳ್ಳೂರು ಸ್ವಾಗತಿಸಿದರು. ರಾಜೇಶ್ ಮಾಸ್ಟರ್ ಅಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಮಧೂರು ವಂದಿಸಿದರು.