ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯಲ್ಲಿ ಶನಿವಾರ ವಿವಿಧ ರಾಜ್ಯಗಳಿಂದ ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಬಂದು ಸೇರಿದ್ದರು. ಶನಿವಾರ ಮುಂಜಾನೆ ಸುರಿದ ಬಿರುಸಿನ ಮಳೆಯಿಂದ ದೇವಾಲಯದ ಕಾರ್ಯಕ್ರಮಗಳಲ್ಲಿ ಒಂದಷ್ಟು ಗೊಂದಲ ಸೃಷ್ಟಿಯಾಗಿದ್ದರೂ, ಭಕ್ತಾದಿಗಳಿಗೆ ಯಾವುದೇ ಅಡಚಣೆಯಾಗದಂತೆ ಸ್ವಯಂಸೇವಕರು ವ್ಯವಸ್ಥೆ ಸಜ್ಜುಗೊಳಿಸಿರುವುದು ಪ್ರಶಂಸೆಗೆ ಕಾರಣವಾಯಿತು. ಬೆಳಗ್ಗೆ 5.30ರಿಂದ ಸುಮಾರು ಒಂದು ತಾಸು ಕಾಲ ಬಿರುಸಿನ ಮಳೆಯಾಗಿದೆ.
ಕಾಸರಗೋಡು ಸಹಿತ ಕರಾವಳಿಯಾದ್ಯಂತ ವಿವಿಧೆಡೆ ಮಳೆಯಾಗಿದ್ದು, ಉತ್ಸವದ ಸಂಭ್ರಮದಲ್ಲಿದ್ದ ಮಧೂರಿನಲ್ಲಿ ಅಲ್ಲಲ್ಲಿ ನೀರು ತುಂಬಿಕೊಂಡು ಸಮಸ್ಯೆಗೆ ಕಾರಣವಾಗಿತ್ತು. ಮಳೆಯ ಹಿನ್ನೆಲೆಯಲ್ಲಿ ಭಜನೆ ಹೊರತುಪಡಿಸಿ ಉಳಿದ ವೇದಿಕೆಯ ಕಾರ್ಯಕ್ರಮಗಳನ್ನು ರದ್ದುಪಡಿಸಲಾಯಿತು. ಸಾಂಸ್ಕøತಿಕ ಕಾಯ್ರಕ್ರಮಗಳನ್ನು ವ್ಯವಸ್ಥೆಗೊಳಿಸಿದ್ದ ಮೂರು ವೇದಿಕೆಗಳು ಗದ್ದೆ ಬಯಲಲ್ಲಿದ್ದು, ಮಳೆ ನೀರು ತುಂಬಿಕೊಂಡು ಧ್ವನಿ, ಬೆಳಕಿನ ವ್ಯವಸ್ಥೆಯಲ್ಲಿ ವ್ಯತ್ಯಾಸವುಂಟದ ಹಿನ್ನೆಲೆಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಪ್ರದರ್ಶನ ರದ್ದುಗೊಳಿಸಬೇಕಾಯಿತು. ಭಜನಾ ಸಂಕೀರ್ತನೆ ನಡೆಯುವ ನಾಲ್ಕನೇ ವೇದಿಕೆಯಲ್ಲಿ ಭಜನೆ ಎಂದಿನಂತೆ ಮುಂದುವರಿಯಿತು. ಈ ಮಧ್ಯೆ ಬೆಳಿಗ್ಗೆ 10 ರಿಂದ ಒಂದನೇ ವೇದಿಕೆಯಲ್ಲಿ ಧ್ವನಿ, ಬೆಳಕಿನ ವ್ಯವಸ್ಥೆಯಿಲ್ಲದೆ ನೃತ್ಯ ಪ್ರದರ್ಶನ ನಡೆದಿದ್ದು, ಎಂದಿನಂತೆ ಪ್ರೇಕ್ಷಕರು ನೆರೆದಿದ್ದರು. ಸಂಜೆ ವೇಳೆಗೆ ಸಭಾ ಕಾರ್ಯಕ್ರಮ ಎಂದಿನಂತೆ ಮುಂದುವರಿಯಿತು.
ಪಾಕಶಾಲೆಗೆ ನುಗ್ಗಿದ ನೀರು:
ಪಾಕಶಾಲೆಯಲ್ಲಿ ನೀರುತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ಆಹಾರ ತಯಾರಿಗೂ ಅಲ್ಪ ಅಡಚಣೆಯುಂಟಾಗಿತ್ತು. ಸ್ವಯಂಸೇವಕರು ನೀರು ತೆರವುಗೊಳಿಸುವುದರೊಂದಿಗೆ ಪಾಕಶಾಲೆಯಲ್ಲಿ ಎಂದಿನಂತೆ ಅಡುಗೆ ನಡೆಸಲು ಸಹಕರಿಸಿದರು. ಕೆಸರುಮಯವಾಗಿದ್ದ ಜಾಗಕ್ಕೆ ಮರದ ಹಲಿಗೆಗಳನ್ನಿರಿಸಿ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಮಳೆ ನೀರು ಅಲ್ಲಲ್ಲಿ ದಾಸ್ತಾನುಗೊಂಡಿದ್ದ ಹಿನ್ನೆಲೆಯಲ್ಲಿ ವಾಹನ ನಿಲುಗಡೆಗೆ ಸಮಸ್ಯೆ ಎದುರಾಗಿದ್ದು, ಇದರಿಂದ ಕಾಸರಗೋಡು ಭಾಗದಿಂದ ಆಗಮಿಸುವ ವಾಹನಗಳನ್ನು ಉಳಿಯತ್ತಡ್ಕದಲ್ಲಿ ಹಾಗೂ ಪುತ್ತೂರು-ಬದಿಯಡ್ಕ ಭಾಗದಿಂದ ಆಗಮಿಸುವ ವಾಹನಗಳನ್ನು ಏರಿಕ್ಕಳ ಭಾಗದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಹರಿದುಬರಲಾರಂಭಿಸಿದ ಭಕ್ತಾದಿಗಳನ್ನು ನಿಯಂತ್ರಿಸುಯವಲ್ಲಿ ಸ್ವಯಂಸೇವಕರು ಹರಸಾಹಸಪಡಬೇಕಾಯಿತು. ಮಹಾಮೂಡಪ್ಪ ಸೇವೆಯ ಅಪ್ಪ ಪ್ರಸಾದ ಪಡೆಯಲು ವಿತರಿಸಲಾಗುತ್ತಿದ್ದ ರಶೀದಿಯನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಿ, ಭಾನುವಾರ ಎಲ್ಲಾ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಉಚಿತವಾಗಿ ವಿತರಿಸಲು ತೀರ್ಮಾನಿಸಲಾಯಿತು.