ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಸದ್ಯ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.
ನಾರ್ವೆಯಲ್ಲಿ ಪ್ರಮುಖ ರಾಜಕೀಯ ಪಕ್ಷವಾದ Partiet Sentrum ಜೊತೆ ನಂಟು ಹೊಂದಿರುವ ಮೇಂಬರ್ ಆಫ್ ಪಾಕಿಸ್ತಾನ್ ವರ್ಲ್ಡ್ ಅಲಯನ್ಸ್ (PWA) ಸಂಘಟನೆಯೂ ಇಮ್ರಾನ್ ಖಾನ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂದು ಅವರ ಹೆಸರನ್ನು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಗೆ ನಾಮನಿರ್ದೇಶನ ಮಾಡಿದೆ.
ಪಾಕಿಸ್ತಾನದ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಕುರಿತಾದ ಖಾನ್ ಅವರ ಕೆಲಸಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ನಾಮನಿರ್ದೇಶನ ಮಾಡುವ ಹಕ್ಕು ಹೊಂದಿರುವ Partiet Sentrum ಜೊತೆ PWA ಮೈತ್ರಿ ಮಾಡಿಕೊಂಡು ನಾಮನಿರ್ದೇಶನ ಮಾಡಲಾಗಿದೆ ಎಂದು ಆ ಪಕ್ಷ ಎಕ್ಸ್‌ನಲ್ಲಿ ಹೇಳಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಮಾಡಲು ಇಮ್ರಾನ್ ಖಾನ್ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಅವರಿಗೆ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂದು 2019ರಲ್ಲೂ ಕೆಲವರು ನಾಮನಿರ್ದೇಶನ ಮಾಡಿದ್ದರು.
ಅಧಿಕಾರಿ ದುರುಪಯೋಗ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ಇಮ್ರಾನ್ ಖಾನ 14 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಅವರು ಪಿಟಿಐ ಎಂಬ ರಾಜಕೀಯ ಪಕ್ಷದ ನಾಯಕರೂ ಹೌದು.