ವಾಟ್ಸಾಪ್ನ್ನು ಯಾರು ಬಳಕೆ ಮಾಡುವುದಿಲ್ಲ ಹೇಳಿ, ಬದಲಾಗಿ ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರೂ ಸಹ ಈ ವಾಟ್ಸಾಪ್ ಅಪ್ಲಿಕೇಷನ್ ಅನ್ನು ದಿನನಿತ್ಯ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನೀವು ಕೂಡ ಈ ವಾಟ್ಸಾಪ್ ಬಳಸುತ್ತಿದ್ದರೆ, ಈ ವಿಷಯವನ್ನು ಗಮನದಲ್ಲಿರಿಸಿಕೊಳ್ಳಿ.
ವಾಟ್ಸಾಪ್‌ನಲ್ಲಿ ಬ್ಲರ್ ಫೋಟೋ ಮೂಲಕ ವಂಚಕರು ನಿಮ್ಮನ್ನು ಸಮಸ್ಯೆಯ ಸುಳಿಗೆ ಸಿಲುಕಿಸುವ ತಂತ್ರ ರೂಪಿಸಿದ್ದಾರೆ. ಹಾಗಿದ್ರೆ ಈ ಅಪಾಯವನ್ನು ತಪ್ಪಿಸುವುದೇಗೆ ಎಂಬುದನ್ನು ತಿಳಿಯೋಣ.
ಬ್ಲರ್ ಇಮೇಜ್ ಸ್ಕ್ಯಾಮ್:
ವಾಟ್ಸಾಪ್ ಬಳಸುವ ಜನರು ಇದರ ಬಗ್ಗೆ ತಿಳಿದುಕೊಳ್ಳುವುದು ಅತ್ಯತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲಿ 'ಬ್ಲರ್ ಇಮೇಜ್ ಸ್ಕ್ಯಾಮ್' ಎಂದು ಕರೆಯಲ್ಪಡುವ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ಈ ವಂಚನೆಯ ಮೂಲಕ ವಂಚಕರು ಜನರನ್ನು ಬಹಳ ಚಾಕಚಕ್ಯತೆಯಿಂದ ಮೋಸ ಮಾಡುತ್ತಿದ್ದಾರೆ. ಇದರಿಂದ ಸೈಬರ್ ಕಳ್ಳರು ಹೆಚ್ಚಿನ ಲಾಭ ಪಡೆದುಕೊಳ್ಳುವ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ.
ಈ ವಂಚನೆಯಲ್ಲಿ ನಿಮ್ಮ ವಾಟ್ಸಾಪ್‌ಗೆ ಅಪರಿಚಿತ ಸಂಖ್ಯೆಯಿಂದ ಬ್ಲರ್ ಫೋಟೋವನ್ನು ಕಳುಹಿಸಲಾಗುತ್ತದೆ. ಈ ಫೋಟೋದ ಕೆಳಗೆ ಒಂದು ಶೀರ್ಷಿಕೆ ಇರಲಿದ್ದು, ಅದನ್ನು ಓದಿದ ನಂತರ ನಿಮಗೆ ಅದನ್ನು ನೋಡುವ ಕುತೂಹಲ ಹೆಚ್ಚಾಗುತ್ತದೆ. ಇದು ನಿಮ್ಮ ಫೋಟೋನಾ, ನನಗೆ ನಿಮ್ಮ ಹಳೆಯ ಫೋಟೋ ಸಿಕ್ಕಿತು ಎಂದು ಫೋಟೋ ಕೆಳಭಾಗದಲ್ಲಿ ಬರೆಯಲಾಗಿರುತ್ತದೆ. ಇದನ್ನು ಓದಿದಾಗ ಫೋಟೋ ಮೇಲೆ ಕ್ಲಿಕ್ ಮಾಡಬೇಕೆನಿಸುತ್ತದೆ. ಆದರೆ ನಿಮ್ಮ ಈ ಒಂದು ಕ್ಲಿಕ್ ನಿಮಗೆ ನಾನಾ ಸಮಸ್ಯೆಗಳನ್ನ ತಂದೊಡ್ಡಲಿದೆ.
ನೀವು ಫೋಟೋ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮನ್ನು ಲಿಂಕ್‌ಗೆ ಮರುನಿರ್ದೇಶಿಸಲಾಗುತ್ತದೆ. ಈ ಲಿಂಕ್ ನಿಮ್ಮನ್ನು ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು, OTP ಅಥವಾ ಬ್ಯಾಂಕ್ ವಿವರಗಳನ್ನು ಕೇಳಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಲಿಂಕ್ ನಿಮ್ಮ ಫೋನ್‌ಗೆ ವೈರಸ್‌ಗಳು ಅಥವಾ ಮಾಲ್‌ವೇರ್‌ಗಳನ್ನು ಸಹ ಇಂಜೆಕ್ಟ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಯಾವ್ಯಾವ ಸಮಸ್ಯೆ ಎದುರಾಗಲಿವೆ?
ಹ್ಯಾಕರ್‌ಗಳು ನಿಮ್ಮ ಫೋನ್ ಅನ್ನು ಪ್ರವೇಶಿಸಬಹುದು
ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಬಹುದು
ನಿಮ್ಮ ವೈಯಕ್ತಿಕ ಮಾಹಿತಿ ಕದಿಯಲ್ಪಡಬಹುದು
ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಸಾಧ್ಯತೆ
ಫೋನ್‌ನಲ್ಲಿರುವ ಫೋಟೋಗಳು, ಸಂಪರ್ಕ ಸಂಖ್ಯೆಗಳು ಇತ್ಯಾದಿಗಳನ್ನು ಹ್ಯಾಕರ್‌ಗಳು ಪ್ರವೇಶಿಸಬಹುದು.
ಸ್ಕ್ಯಾಮ್ ತಡೆಗಟ್ಟುವುದೇಗೆ?
ನಿಮ್ಮ ಫೋನ್‌ನಲ್ಲಿ ಆಂಟಿ-ವೈರಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
ವಾಟ್ಸಾಪ್ನ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬಲಪಡಿಸಿ.
ಅಪರಿಚಿತ ಸಂಖ್ಯೆಗಳಿಂದ ಫೋಟೋಗಳು ಅಥವಾ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ.
ತಪ್ಪಾಗಿ ಕ್ಲಿಕ್ ಮಾಡಿದರೆ, ತಕ್ಷಣ ಪಾಸ್‌ವರ್ಡ್ ಬದಲಾಯಿಸಿ ಮತ್ತು ಬ್ಯಾಂಕ್‌ಗೆ ತಿಳಿಸಿ.