ದುಬೈ: ತಮ್ಮ ಭದ್ರನೆಲೆ ಸಾದಾ ನಗರದ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಿಂದಾಗಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಬೆಂಬಲಿತ ಯೆಮನ್‌ನ ಹುತಿ ಬಂಡುಕೋರರು ಶನಿವಾರ ತಿಳಿಸಿದ್ದಾರೆ.
ನಸ್ರಲ್ಲಾ ಹತ್ಯೆ ಬಲಿದಾನದ ಕಿಚ್ಚನ್ನು ಹೆಚ್ಚಿಸಿದೆ: ಹುತಿ ಬಂಡುಕೋರರು
ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಡುಗಡೆ ಮಾಡಿದ ದಾಳಿಯ ದೃಶ್ಯದ ಭೀಕರತೆಯು ಹುತಿ ಬಂಡುಕೋರರು ಹೇಳಿಕೊಂಡಿದ್ದಕ್ಕಿಂತ ಹೆಚ್ಚಿನ ಪ್ರಾಣಹಾನಿ ಸಂಭವಿಸಿದ್ದನ್ನು ಸೂಚಿಸುತ್ತದೆ.
'ಅಮೆರಿಕ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ' ಎಂದು ಹುತಿ ಬಂಡುಕೋರರ ಅಲ್-ಮಸೀರಹ್ ಚಾನಲ್ ವರದಿ ಮಾಡಿದೆ. ಅದು ಪ್ರಸಾರ ಮಾಡಿದ ದೃಶ್ಯದಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿಯುತ್ತಿರುವುದು ಕಾಣಬಹುದು.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ಆರಂಭವಾದ ಬಳಿಕ ಆ ಭಾಗದಲ್ಲಿ ಸಂಚರಿಸುವ ಸರಕು ಹಡಗುಗಳನ್ನು ಗುರಿಯಾಗಿಸಿಕೊಂಡು ಹುತಿ ಬಂಡುಕೋರರು ದಾಳಿ ನಡೆಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಅಮೆರಿಕವೂ ದಾಳಿ ನಡೆಸುತ್ತಲೇ ಬಂದಿದೆ. ಈವರೆಗೆ ಅಮೆರಿಕ ದಾಳಿಯಿಂದ 69 ಮಂದಿ ಮೃತರಾಗಿದ್ದಾರೆ ಎಂದು ಹುತಿ ಹೇಳಿದೆ.
ಟ್ರಂಪ್ ಬಿಡುಗಡೆ ಮಾಡಿದ ಬಾಂಬ್ ದಾಳಿಯ ದೃಶ್ಯಗಳು ಬಂಡುಕೋರ ನಾಯಕರನ್ನು ಗುರಿಯಾಗಿಸಿಕೊಂಡಿರುವುದನ್ನು ಸೂಚಿಸುತ್ತವೆ. ದಾಳಿಯಲ್ಲಿ ಭದ್ರತಾ ಅಥವಾ ಮಿಲಿಟರಿ ಸಿಬ್ಬಂದಿ ಗಾಯಗೊಂಡಿರುವ ಅಥವಾ ಸಾವಿಗೀಡಾಗಿರುವ ಬಗ್ಗೆ ಹುತಿ ಬಂಡುಕೋರರು ಯಾವುದೇ ಮಾಹಿತಿ ನೀಡಿಲ್ಲ.
ಟ್ರಂಪ್ ಕಪ್ಪು ಬಿಳುಪಿನ ಡ್ರೋನ್ ವಿಡಿಯೊ ಬಿಡುಗಡೆ ಮಾಡಿದ್ದು, ಸುಮಾರು 70 ಜನರ ಗುಂಪಿನ ಮೇಲೆ ದಾಳಿ ನಡೆಸಿರುವುದು ಅದರದಲ್ಲಿ ದಾಖಲಾಗಿದೆ. ಸುಮಾರು 25 ಸೆಕೆಂಡುಗಳ ವಿಡಿಯೊ ಇದಾಗಿದ್ದು, ಸ್ಫೋಟದ ಬಳಿಕ ಕೇವಲ ಕುಳಿ ಮಾತ್ರ ಇರುವುದು ಕಾಣಬಹುದು.
ಹಡಗುಗಳ ಮೇಲೆ ದಾಳಿ ನಡೆಸಲು ಹುತಿಗಳು ಸೇರಿದ್ದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಯಾವ ಸ್ಥಳದಲ್ಲಿ ದಾಳಿ ನಡೆಸಲಾಗಿದೆ ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ಇನ್ನು ಮುಂದೆ ಹಡಗಿನ ಮೇಲೆ ದಾಳಿ ನಡೆಸುವ ಅಪಾಯವನ್ನು ಅವರು ತೆಗೆದುಕೊಳ್ಳರು ಎಂದು ಟ್ರಂಪ್ ಹೇಳಿದ್ದಾರೆ.