ಢಾಕಾ: ರಾಜಧಾನಿ ಹೊರವಲಯದಲ್ಲಿ ವಸತಿ ನಿವೇಶನಗಳ ಅಕ್ರಮ ಹಂಚಿಕೆಗೆ ಸಂಬಂಧಿಸಿದಂತೆ, ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ, ಅವರ ಮಗ ಸಜೀಬ್ ವಾಜೆದ್ ಹಾಗೂ ಇತರ 16 ಮಂದಿ ವಿರುದ್ಧ ಬಾಂಗ್ಲಾದೇಶದ ನ್ಯಾಯಾಲಯ ಮಂಗಳವಾರ ಹೊಸತಾಗಿ ಬಂಧನ ವಾರಂಟ್ ಹೊರಡಿಸಿದೆ.
ಪೂರ್ವಾಚಲ್ ನ್ಯೂಟೌನ್‌ನಲ್ಲಿರುವ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದ ಹಸೀನಾ, ಮಗನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಆಯೋಗವು (ಎಸಿಸಿ) ಸಲ್ಲಿಸಿದ ಎರಡು ದೋಷಾರೋಪ ಪಟ್ಟಿಗಳನ್ನು ಆಧರಿಸಿ ಢಾಕಾದ ಮೆಟ್ರೊಪಾಲಿಟಿನ್ ಹಿರಿಯ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.
ಉಳಿದಂತೆ, ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಪ್ರಮುಖ ಆರೋಪಿಗಳಾಗಿದ್ದಾರೆ.
ಶೇಖ್ ಹಸೀನಾ ಸೇರಿದಂತೆ ಉಳಿದವರ ಬಂಧನಕ್ಕೆ ಸಂಬಂಧಿಸಿದಂತೆ ಏ.29ರ ಒಳಗಾಗಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿತ್ತು.
ಕಳೆದೊಂದು ವಾರದಲ್ಲಿ ಶೇಖ್ ಹಸೀನಾ ಹಾಗೂ ಕುಟುಂಬದ ಸದಸ್ಯರ ವಿರುದ್ಧ ನ್ಯಾಯಾಲಯವು ಎರಡು ಬಂಧನ ವಾರಂಟ್‌ಗಳನ್ನು ಹೊರಡಿಸಿದೆ.