HEALTH TIPS

ಮಧೂರು-ಶತಮಾನದ ಮೊದಲ ಮಹಾ ಮೂಡಪ್ಪ ಸೇವೆ ಸಂಪನ್ನ: ಮಹಾಗಣಪತಿ ದಿವ್ಯದರ್ಶನ ವೀಕ್ಷಣೆಗೆ ಲಕ್ಷಮಂದಿ ಭಕ್ತಾದಿಗಳು

ಮಧೂರು: ಕುಂಬಳೆ ಸೀಮೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಶ್ರೀಮಹಾಗಣಪತಿಗೆ ಈ ಶತಮಾನದ ಮೊದಲ ಮಹಾ ಮೂಡಪ್ಪ ಸೇವೆ ಶನಿವಾರ ರಾತ್ರಿ ನಡೆದು, ಭಾನುವಾರ ಬೆಳಗ್ಗೆ ದಿವ್ಯದರ್ಶನದೊಂದಿಗೆ ಸಂಪನ್ನಗೊಂಡಿತು. ದಕ್ಷಿಣ ಭಾರತದ ಮಹಾ ಕುಂಭಮೇಳವೆಂದೇ ಖ್ಯಾತಿಗೊಳಗಾದ ಗಡಿನಾಡು ಕಾಸರಗೋಡಿನ ಪ್ರಸಿದ್ದ ದೇಗುಲ ಮಧೂರಿನ ಪ್ರಥಮ ಪೂಜಿತ ಗಣಪತಿಯ ದಿವ್ಯದರ್ಶನವನ್ನು ಸಾವಿರಾರು ಮಂದಿ ಭಕ್ತಾದಿಗಳು ಕಣ್ತುಂಬಿಕೊಂಡು ಧನ್ಯರಾದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಮಹಾಮೂಡಪ್ಪ ಸೇವೆ ಸಂಪನ್ನಗೊಂಡಿದೆ.


ಐತಿಹಾಸಿಕ ಮೂಡಪ್ಪ ಸೇವೆ ಜತೆಗೆ ಶ್ರೀಮಹಾಗಣಪತಿಯ ದಿವ್ಯದರ್ಶನದೊಂದಿಗೆ ಪುನೀತರಾಗಲು ಭಾನುವಾರ ಮುಂಜಾನೆ 4ಕ್ಕೂ ಮೊದಲೇ ಭಕ್ತಾದಿಗಳು ಸರತಿ ಸಾಲಿನೊಂದಿಗೆ ದೇವಾಲಯಕ್ಕೆ  ಆಗಮಿಸತೊಡಗಿದ್ದರು. ಇನ್ನು ಕೆಲವು ಭಕ್ತಾದಿಗಳು ಶನಿವಾರ ರಾತ್ರಿ ಶ್ರೀಮಹಾಗಣಪತಿ ವಿಗ್ರಹವನ್ನು ಅಪೂಪದಿಂದ  ತುಂಬುವ ಕಾರ್ಯವನ್ನು ತಡರಾತ್ರಿ ವರೆಗೂ ವೀಕ್ಷಿಸಿ ದೇಗುಲದಲ್ಲೇ ಉಳಿದುಕೊಂಡು ಬೆಳಗ್ಗೆ ಶ್ರೀ ಬೊಡ್ಡಜ್ಜನ ದಿವ್ಯದರ್ಶನವನ್ನು ಕಣ್ತುಂಬಿಕೊಂಡಿದ್ದಾರೆ.  ಕಾಸರಗೋಡು ಭಾಗದಲ್ಲಿ ದೇವಾಲಯದಿಂದ ಮೂರು ಕಿ.ಮೀ ದೂರದ ಉಳಿಯತ್ತಡ್ಕ ರಸ್ತೆಯ ವಿದ್ಯಾನಗರ ಎ.ಆರ್.ಕ್ಯಾಂಪ್ ಬಳಿಯಿಂದ   ದಿವ್ಯದರ್ಶನ ವೀಕ್ಷಿಸಲು ಬಕ್ತಾದಿಗಳ ಸರತಿ ಸಾಲು ಕಂಡುಬಂದಿದೆ. ಮತ್ತೊಂದೆಡೆ ಪುತ್ತೂರು ಭಾಗದಿಂದ ನೀರ್ಚಾಲ್ ಮೂಲಕ ಮಧೂರು ತೆರಳುವ ರಸ್ತೆಯ ಏರಿಕ್ಕಳ, ಕೊಲ್ಯ, ಕುಂಜರಕ್ಕಾನ ಪ್ರದೇಶದ ಸುಮಾರು 3 ಕಿ.ಮೀ.ದೂರದ ವರೆಗೂ ಸರತಿ ಸಾಲು ವಿಸ್ತರಿಸಿತ್ತು. ಕಾಸರಗೋಡು ಸಹಿತ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಕಣ್ಣೂರು ಜಿಲ್ಲೆಗಳಿಂದ ಸುಮಾರು ಒಂದುವರೆ ಲಕ್ಷ ಭಕ್ತಾದಿಗಳು ಶ್ರೀ ಮಹಾಗಣಪತಿಯ ದಿವ್ಯದರ್ಶನವನ್ನು ವೀಕ್ಷಿಸಿ ಪುನೀತರಾದರು. 


ನಂತರ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ, ಮಹಾಪೂಜೆ ನಡೆಯಿತು. ಸಂಜೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀದೇವರ ಕೆರೆಯಲ್ಲಿ ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯಿತು. 


ಮುಗಿಲುಮುಟ್ಟಿದ ಜಯಘೋಷ: 

ಶನಿವಾರ ರಾತ್ರಿ ಶ್ರೀಮಹಾಗಣಪತಿ ವಿಗ್ರಹದ ಸುತ್ತು ನಿರ್ಮಿಸಲಾದ ಕಬ್ಬಿನ ಬೇಲಿ ಸುತ್ತು ಅಪೂಪ ಹಾಗೂ ಸುವಸ್ತು ತುಂಬುವ ಪವಿತ್ರ ಕಾರ್ಯ ತಡರಾತ್ರಿ ವರೆಗೂ ಮುಂದುವರಿದಿತ್ತು. ನಂತರ ಶಯ್ಯಾಕಲ್ಪನೆ, ಕವಾಟ ಬಂಧನದ ಬಳಿಕ ಮುಚ್ಚಲ್ಪಟ್ಟ ಶ್ರೀದೇವರ ಗರ್ಭಗೃಹದ ಬಾಗಿಲು ಭಾನುವಾರ  ಬೆಳಿಗ್ಗೆ 6.20 ಕ್ಕೆ ಕವಾಟೋದ್ಘಾಟನೆ ನಡೆದು ಗರ್ಭಗೃಹ ಬಾಗಿಲು  ತೆರೆದುಕೊಳ್ಳುತ್ತಿದ್ದಂತೆ ಭಕ್ತಾದಿಗಳ ಜಯಘೋಷ ಮುಗಿಲು ಮುಟ್ಟಿತ್ತು. ಈ ವೇಳೆ ಅಪೂಪಪರ್ವತದ(ಅಪ್ಪಕಜ್ಜಾಯ) ಮಧ್ಯದಿಂದ ಮೂಡಿಬಂದ ಬೊಡ್ಡಜ್ಜ ಶ್ರೀಮಧೂರು ಸಿದ್ಧಿವಿನಾಯಕ ದೇವರ ದಿವ್ಯ ದರ್ಶನದೊಂದಿಗೆ ವಿಶೇಷಾಭಿಷೇಕ, ಪ್ರಸನ್ನ ಪೂಜೆ, ಅಪೂಪ ಮಹಾಪ್ರಸಾದದ ವಿತರಣೆ ನಡೆಯಿತು. 

ಮೂಡಪ್ಪ ಸೇವೆಗಾಗಿ ಶನಿವಾರ ಬೆಳಗ್ಗೆ ಅರಿಕೊಟ್ಟಿಗೆ ಮುಹೂರ್ತವನ್ನು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ  ನೆರವೇರಿಸಿದ್ದರು. ವೈದಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ದೀಪಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಕಲಶಾಭಿಷೇಕ ನಡೆಯಿತು.  ಮೂಡಪ್ಪ ಸೇವೆಗೆ ಅರಿಕೊಟ್ಟಿಗೆ ಮುಹೂರ್ತ ನಡೆಸುವುದರೊಂದಿಗೆ  ಅಪ್ಪ ತಯಾರಿಗೆ ಚಾಲನೆ ನೀಡಲಾಗಿತ್ತು.  


ಮೂಲಸ್ಥಾನ ಭೇಟಿ:

ಶನಿವಾರ ಸಂಜೆ ಉತ್ಸವ ಬಲಿ, ಮೂಲಸ್ಥಾನ ಉಳಿಯತ್ತಡ್ಕ ಮೂಲಸ್ಥಾನಕ್ಕೆ ಶ್ರೀದೇವರ ಸವಾರಿ, ರಾತ್ರಿ 8 ರಿಂದ ಶ್ರೀದೇವರ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ, ರಾತ್ರಿ  10 ರಿಂದ ಶ್ರೀಭೂತಬಲಿ, ಮಹಾಮೂಡಪ್ಪಾಧಿವಾಸ ಹೋಮ, ರಾತ್ರಿ 11 ರಿಂದ ಮಹಾಗಣಪತಿ ದೇವರಿಗೆ ಮಹಾಮೂಡಪ್ಪ ಸಮರ್ಪಣೆ, ಶಯ್ಯಾಕಲ್ಪನೆ, ಕವಾಟ ಬಂಧನ ನಡೆಯಿತು.  

ಇಂದು ಸಮಾರೋಪ: 

ಮಾ. 27ರಂದು ಆರಂಭಗೊಂಡ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವಾ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಏ. 7ರಂದು  ಜರುಗಲಿದೆ. ಬೆಳಗ್ಗೆ ಪಂಚವಿಂಶತಿ ಸಂಪ್ರೋಕ್ಷಣಾ ಕಲಶಾಭಿಷೇಕ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ, ಬೆಳಿಗ್ಗೆ 10 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.


ಭಾನುವಾರ ಮುಂಜಾನೆಯೇ ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳು ಸರತಿ ಸಾಲಲ್ಲಿ ಕಂನಡುಬಂದಿದ್ದು, ಬಿಸಿಲಿನ ಪ್ರಖರತೆ ಏರುತ್ತಿದ್ದಂತೆ ಸಂಖ್ಯೆ ಮತ್ತಷ್ಟು ಹೆಚ್ಚಳಗೊಂಡಿತ್ತು.    ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ನಾಡಿನ ಪ್ರಮುಖ ಗಣ್ಯರಾದ ಕೊಡುಗೈ ದಾನಿಗಳು ಹಾಗೂ ಉದ್ಯಮಿಗಳಾದ ಕೆ.ಕೆ.ಶೆಟ್ಟಿ, ಇ.ಮಹಾಬಲೇಶ್ವರ ಭಟ್, ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ನ್ಯಾಯವಾದಿ ಪಿ.ವಿ.ವಿನಯನ್, ಚಿತ್ರನಟಿ ಭವ್ಯಶ್ರೀ, ಸಾಮಾಜಿಕ ನೇತಾರ ಪುನೀತ್ ಕೆರೆಹಳ್ಳಿ ಮೊದಲಾದವರು ದೇವಾಲಯಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು. 

ದೇವಾಲಯದ ಪ್ರವೇಶ ದ್ವಾರ ಸಹಿತ ಎಂಟು ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರಕ್ಕಿಂತ ಮಿಕ್ಕಿದ ಸ್ವಯಂಸೇವರು ಭಕ್ತಾದಿಗಳನ್ನು ಹಾಗೂ ವಾಹನಗಳನ್ನು ನಿಯಂತ್ರಿಸಿದರು. ಜತೆಗೆ ಪೆÇೀಲೀಸರು, ಅಗ್ನಿಶಾಮಕದಳ, ಆಂಬ್ಯುಲೆನ್ಸ್, ಸೇವಾ ಭಾರತಿ ಸ್ವಯಂಸೇವಕರು, ಬಿಎಂಎಸ್ ಸ್ವಯಂಸೇವಕರು ಸಹಕರಿಸಿದ್ದರು.

ಶ್ರೀದೇವರ ದರ್ಶನಕ್ಕೆ ಆಗಮಿಸಿದ ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯ ನಾಗರಿಕರು, ರೋಗಿಗಳಿಗೆ ಮತ್ತು ವಿಶೇಷ ಗಣ್ಯರಿಗೆ ಶ್ರೀದೇವರ ವೀಕ್ಷಣೆಗಾಗಿ ಸುಗಮ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಳದ ಹೊರಬದಿ ಸ್ಥಳೀಯ ಬಿಎಂಎಸ್ ಘಟಕ ಉಚಿತ ಕಲ್ಲಂಗಡಿ ವಿತರಣೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿತ್ತು. 

ಉಪಚಾರ ವ್ಯವಸ್ಥೆಯಲ್ಲಿ ಬೆಳಿಗ್ಗೆ ಉಪ್ಪಿಟ್ಟು, ಪಚ್ಚೆಹೆಸರು, ಚಹಾ,ಕಾಫಿ, ಮಧ್ಯಾಹ್ನ ಊಟ, ಸಂಜೆ ಚಹಾ ಸಹಿತ ಅವಲಕ್ಕಿ, ರಾತ್ರಿ ಊಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾ. 27ರಂದು ಆರಂಭಗೊಂಡಿರುವ ಅಖಂಡ ಭಜನಾ ಸಂಕೀರ್ಣ ಕಾರ್ಯಕ್ರಮ ಮುಂದುವರಿದಿದ್ದು, ಏ. 7ರಂದು ಸಂಪನ್ನಗೊಳ್ಳಲಿದೆ.



ಫೋಟೋ : ಅಪೂಪ ಪರ್ವತದಲ್ಲಿ ದಿವ್ಯದರ್ಶನದೊಂದಿಗೆ ಕಂಗೊಳಿಸಿದ ಮಧೂರು ಶ್ರೀ ಮಹಾಗಣಪತಿ ದೇವರು.

: ಗರ್ಭಗುಡಿ ಬಾಗಿಲು ತೆರೆಯಲು ಕಾತರದಿಂದ ಕಾಯುತ್ತಿರುವ ಭಕ್ತಾದಿಗಳು.

: ದಿವ್ಯದರ್ಶನ ವೀಕ್ಷಣೆಗಾಗಿ ದೇವಾಲಯದಲ್ಲಿ ಬಂದುಸೇರಿದ ಭಕ್ತಾದಿಗಳು.

: ಭಕ್ತಾದಿಗಳಿಗೆ ವಿತರಿಸಲಿರುವ ಅಪ್ಪ

----------------------------------------


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries