ಶಿಮ್ಲಾ: ಕಾಂಗ್ರೆಸ್ ಪಕ್ಷದವರು ವಕ್ಫ್ ಮಂಡಳಿಗಳತ್ತ ಮೃದು ಧೋರಣೆಯನ್ನು ತಳೆದಿದ್ದು, ಮಂಡಳಿಗಳು ನಿಯಮ ಉಲ್ಲಂಘಿಸಲು ಕಾರಣವಾಯಿತು ಎಂದು ಬಿಜೆಪಿ ಸಂಸದೆ ಕಂಗನಾ ರನೌತ್ ಶನಿವಾರ ಆರೋಪಿಸಿದ್ದಾರೆ.
ಮಂಡಿ ಪ್ರದೇಶದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಕ್ಫ್ ಮಂಡಳಿಗಳ ರಚನೆಯ ಹಿಂದೆ ದೊಡ್ಡ ಪಿತೂರಿ ಇತ್ತು.
ಇದರಿಂದಾಗಿ ಇಡೀ ದೇಶ ಇಂದಿಗೂ ಬಳಲುತ್ತಿದೆ. ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರದಿಂದಾಗಿ ದೊಡ್ಡ ಪ್ರಮಾಣದ ಭೂಕಬಳಿಕೆಯ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಭೂಮಿಯ ಮೇಲೆ ಸಾಕಷ್ಟು ಭ್ರಷ್ಟಾಚಾರ ಮತ್ತು ಅತಿಕ್ರಮಣ ನಡೆದಿದೆ. ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆ ಕಾನೂನನ್ನು ಮೀರರಲು ಸಾಧ್ಯವಿಲ್ಲ. ಮಸೂದೆಯು ವಕ್ಫ್ ಮಂಡಳಿಗಳನ್ನು ಕಾನೂನಿನ ವ್ಯಾಪ್ತಿಗೆ ತರುತ್ತದೆ ಎಂದು ರನೌತ್ ಹೇಳಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆ ಅಂಗೀಕಾರವು ಭ್ರಷ್ಟಾಚಾರ ಮತ್ತು ಪಾರದರ್ಶಕ ವ್ಯವಸ್ಥೆಗೆ ಅನುವು ಮಾಡಿಕೊಡಲಿದೆ. ಇದರಿಂದಾಗಿ ಭೂಮಿ ಅತಿಕ್ರಮಣಗಳ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ರನೌತ್ ತಿಳಿಸಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಅಂಗೀಕರಿಸಲಾಗಿದೆ. ಇದು ದೇಶದ ಐತಿಹಾಸಿಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು 'ಮುಸ್ಲಿಂ ವಿರೋಧಿ', 'ಅಸಂವಿಧಾನಿಕ ನಡೆ' ಎಂದು ಭಾರಿ ವಿರೋಧ ವ್ಯಕ್ತಪಡಿಸಿವೆ.