ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಈ ಕುರಿತ ತೀರ್ಪನ್ನು ಇಂದು ಸೋಮವಾರ ಪ್ರಕಟಿಸಲಿದೆ.
ಭ್ರಷ್ಟಾಚಾರ ಪ್ರಕರಣದಡಿ ಸಾರ್ವಜನಿಕ ಸೇವೆಯ ವ್ಯಕ್ತಿ ವಿರುದ್ಧ ತನಿಖೆಗೆ ಅನುಮತಿ ನೀಡುವುದಕ್ಕೆ ಈ ಅರ್ಜಿಗಳು ಪ್ರಾಥಮಿಕವಾಗಿ ಸಂಬಂಧಿಸಿವೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಮನೋಜ್ ಮಿಶ್ರಾ ಅವರಿದ್ದ ಪೀಠ ಇಂದು( ಏ. 21) ತೀರ್ಪು ಪ್ರಕಟಿಸಲಿದೆ.
ಯಡಿಯೂರಪ್ಪ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ಸಿದ್ಧಾರ್ಥ ಲುಥಾರಾ ಅವರು, 'ಯಡಿಯೂರಪ್ಪ ವಿರುದ್ಧ ತನಿಖೆಗೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಹಿಂದೆ ವಜಾ ಮಾಡಿತ್ತು. ಆದರೆ, ಅದನ್ನು ಪ್ರಶ್ನಿಸಲಾಗಿಲ್ಲ. ಇದೇ ಸ್ವರೂಪದ ಮತ್ತೊಂದು ದೂರನ್ನು ಕೆಳಹಂತದ ಕೋರ್ಟ್ ತಳ್ಳಿಹಾಕಿತ್ತು. ಆದರೆ, ಈ ಆದೇಶವನ್ನು ಹೈಕೋರ್ಟ್ ತಡೆಹಿಡಿದಿದೆ' ಎಂದು ತಿಳಿಸಿದರು.
'ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯ ವಿರುದ್ಧ ತನಿಖೆಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅನ್ವಯ ಪೂರ್ವಾನುಮತಿ ಅಗತ್ಯ ಎಂಬುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ' ಎಂದು ತಿಳಿಸಿದರು.