ಮುಂಬೈ: ವೈವಾಹಿಕ ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡ ಗಂಡ-ಹೆಂಡತಿಗೆ ತಮ್ಮ ಸ್ವಪ್ರತಿಷ್ಠೆಯೇ ಮುಖ್ಯವಾದಾಗ, ಅದಕ್ಕಾಗಿ ಅವರು ಎಂತಹ ಮಟ್ಟಕ್ಕಾದರೂ ಹೋಗುತ್ತಾರೆ. ಇದು ಬಹುವ್ಯಾಜ್ಯಗಳಿಗೆ ಕಾರಣವೂ ಆಗುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಹೇಳಿದೆ.
ಮಗುವಿನ ಜನನ ಪ್ರಮಾಣಪತ್ರದಲ್ಲಿ, ಪಾಲಕರ ವಿವರಕ್ಕೆ ಸಂಬಂಧಿಸಿ ತನ್ನ ಹೆಸರನ್ನು ಮಾತ್ರ ನಮೂದಿಸಬೇಕು ಎಂದು ಕೋರಿ ಪತಿಯಿಂದ ಬೇರೆಯಾದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ, ಪೀಠ ಈ ಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಮಂಗೇಶ್ ಪಾಟೀಲ ಹಾಗೂ ವೈ.ಜಿ.ಖೋಬ್ರಗಡೆ ಅವರು ಇದ್ದ ಪೀಠ, ಮಾರ್ಚ್ 28ರಂದು ಈ ಕುರಿತು ತೀರ್ಪು ನೀಡಿದ್ದು, 'ತಮ್ಮ ಮಗುವಿನ ಜನನ ಪ್ರಮಾಣಪತ್ರಕ್ಕೆ ಸಂಬಂಧಿಸಿ, ಪಾಲಕರ ಪೈಕಿ, ಯಾರೂ ತಮ್ಮ ಹಕ್ಕು ಚಲಾಯಿಸುವಂತಿಲ್ಲ' ಎಂದು ಹೇಳಿದೆ.
'ವೈವಾಹಿಕ ವಿವಾದವೊಂದು ಬಹು ವ್ಯಾಜ್ಯಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. ಈ ಅರ್ಜಿಯು ನ್ಯಾಯಾಲಯದ ಸಮಯ ಹಾಳು ಮಾಡಿದೆ. ಇದರಿಂದ ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆಯೂ ಆಗಿದೆ' ಎಂದು ಅಭಿಪ್ರಾಯಪಟ್ಟಿರುವ ಪೀಠ, ಅರ್ಜಿದಾರ ಮಹಿಳೆಗೆ ₹5 ಸಾವಿರ ದಂಡ ವಿಧಿಸಿದೆ.
'ಪರಿತ್ಯಕ್ತ ಪತಿ ದುಶ್ಚಟಗಳ ದಾಸನಾಗಿದ್ದು, ಮಗುವಿನ ಮುಖವನ್ನೇ ನೋಡಿಲ್ಲ. ಹೀಗಾಗಿ, ಮಗುವಿನ ಜನನ ಪ್ರಮಾಣಪತ್ರದಲ್ಲಿ ತನ್ನ ಹೆಸರನ್ನು ಮಾತ್ರ ಉಲ್ಲೇಖಿಸುವಂತೆ ಔರಂಗಾಬಾದ್ ನಗರಪಾಲಿಕೆಗೆ ನಿರ್ದೇಶನ ನೀಡಬೇಕು' ಎಂದು 38 ವರ್ಷದ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದರು.