ಕಾಸರಗೋಡು: ಕಸ ಮುಕ್ತ ನವ ಕೇರಳ ಅಭಿಯಾನದ ಭಾಗವಾಗಿ ಕಾಸರಗೋಡು ಜಿಲ್ಲೆ ಕಸ ಮುಕ್ತವಾಗಿದೆ. ಕಾಸರಗೋಡು ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ಜಿಲ್ಲಾ ಮಟ್ಟದ ಘೋಷಣೆ ಮಾಡಿದರು. ರಾಜ್ಯ ಸರ್ಕಾರದ ತ್ಯಾಜ್ಯ ನಿರ್ವಹಣಾ ಅಭಿಯಾನಕ್ಕೆ ಸಂಸದರು ಬೆಂಬಲ ಘೋಷಿಸಿದ್ದಾರೆ. ವಿದ್ಯಾವಂತ ಕೇರಳಿಗರು ಪರಿಸರ ಸ್ವಚ್ಛತೆಯ ಜೊತೆಗೆ ವೈಯಕ್ತಿಕ ನೈರ್ಮಲ್ಯಕ್ಕೂ ಪ್ರಾಮುಖ್ಯತೆ ನೀಡಬೇಕು ಎಂದು ಸಂಸದರು ಹೇಳಿದರು. ಆರೋಗ್ಯ ಮತ್ತು ಶಿಕ್ಷಣ ಪರಸ್ಪರ ಪೂರಕವಾಗಿದ್ದು, ಆದ್ದರಿಂದ ಸ್ವಚ್ಛತೆಯ ವಿಷಯದಲ್ಲಿ ಪ್ರತಿಯೊಬ್ಬರೂ ಸ್ವಯಂ ಅರಿವು ಹೊಂದಿರಬೇಕು ಎಂದು ಅವರು ಗಮನಸೆಳೆದರು. ತ್ಯಾಜ್ಯ ನಿರ್ವಹಣಾ ಕ್ಷೇತ್ರದಲ್ಲಿ ಹಸಿರು ಕ್ರಿಯಾಸೇನೆಯ ಸದಸ್ಯರ ಅವಿರತ ಶ್ರಮವನ್ನು ಅವರು ಶ್ಲಾಘಿಸಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ನಾವು ಅದನ್ನು ಪಾಲಿಸಬೇಕು ಎಂದು ಸಂಸದರು ಹೇಳಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ, ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರತಿಯೊಬ್ಬರ ಮನೋಭಾವ ಬದಲಾಗಬೇಕು ಎಂದರು.
ಮಕ್ಕಳಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವ ಭಾಗವಾಗಿ ಪರಿಸರ ನೈರ್ಮಲ್ಯದ ಪಾಠಗಳನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಶಾಸಕ ಚಂದ್ರಶೇಖರನ್ ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮತ್ತು ಎಲ್‍ಎಸ್‍ಜಿಡಿ ಜಂಟಿ ನಿರ್ದೇಶಕ ಜಿ. ಸುಧಾಕರನ್ ಅವರು ವರದಿ ಮಂಡಿಸಿದರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಅಬ್ಬಾಸ್ ಬೇಗಂ, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ ಮಣಿಕಂಠನ್, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಸೈಮಾ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅಡ್ವ. ಎಸ್. ಎನ್. ಸರಿತಾ, ಗ್ರಾಮ ಪಂಚಾಯತ್ ಸಂಘದ ರಾಜ್ಯ ಉಪಾಧ್ಯಕ್ಷ ರಾಜು ಕಟ್ಟಕ್ಯಂ, ಪಂಚಾಯತ್ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಟಿ. ಕೆ. ರವಿ, ಗ್ರಾಮ ಪಂಚಾಯತ್ ಸಂಘಗಳ ಜಿಲ್ಲಾ ಕಾರ್ಯದರ್ಶಿ ಅಡ್ವ. ಎ.ಪಿ.ಉಷಾ, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾದರ್ ಬದರಿಯಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಜೆ.ಸಜಿತ್, ಜಾಸ್ಮಿನ್ ಕಬೀರ್, ಶೈಲಜಾ ಭಟ್, ನವ ಕೇರಳಂ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಸ್ವಾಗತಿಸಿ, ಸ್ವಚ್ಚತಾ ಮಿಷನ್ ಜಿಲ್ಲಾ ಸಂಯೋಜಕ ಪಿ. ಜಯನ್ ವಂದಿಸಿದರು. ಸಂಯೋಜಕ ಮಿಥುನಮ್ ಕೃಷ್ಣನ್ ಮತ್ತು ಸಿಕೆಸಿಎಲ್ ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ ಭಾಗವಹಿಸಿದ್ದರು.