ರಾಯ್‌ಪುರ: ಛತ್ತೀಸಗಢದ ಬಸ್ತಾರ್ ಪ್ರದೇಶದ ಬುಡಕಟ್ಟು ಜನಾಂಗದವರ ಅಭಿವೃದ್ಧಿ ತಡೆಯಲು ನಕ್ಸಲರಿಗೆ ಸಾಧ್ಯವಿಲ್ಲ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಅಭಿವೃದ್ಧಿಗೆ ಕೈಜೋಡಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಕರೆ ನೀಡಿದ್ದಾರೆ.
'ಬಸ್ತಾರ್ ಪಾಂಡುಮ್' ಉತ್ಸವದಲ್ಲಿ ಮಾತನಾಡಿದ ಅವರು, ನಕ್ಸಲಿಸಂ ಅನ್ನು 2026ರ ಮಾರ್ಚ್ ಒಳಗಾಗಿ ಸಂಪೂರ್ಣವಾಗಿ ತೊಡೆದು ಹಾಕಲು ಕೇಂದ್ರ ಸರ್ಕಾರ ಬದ್ಧವಾಗಿದೆ.
ಶರಣಾಗತಿಯಾದವರು ಮುಖ್ಯವಾಹಿನಿಗೆ ಬರಲು ಮತ್ತು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಹಾಯಹಸ್ತ ಚಾಚಲಿದೆ ಎಂದು ತಿಳಿಸಿದ್ದಾರೆ.
ಶರಣಾಗತಿ ಆಗದ ನಕ್ಸಲರನ್ನು ಭಧ್ರತಾ ಪಡೆಗಳೇ ನೋಡಿಕೊಳ್ಳುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ ಶಾ, ಬಸ್ತಾರ್‌ನಲ್ಲಿ ಗುಂಡು ಹಾರಿಸುವುದು, ಬಾಂಬ್‌ಗಳನ್ನು ಸ್ಫೋಟಿಸುವ ದಿನಗಳು ಮುಗಿದಿವೆ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಅಭಿವೃದ್ಧಿಗೆ ಕೈಜೋಡಿಸಿ ಎಂದು ಹೇಳಿದ್ದಾರೆ.
ನೀವು (ನಕ್ಸಲರು) ಶಸ್ತ್ರಾಸ್ತ್ರಗಳನ್ನು ತ್ಯಜಿಸದಿದ್ದರೆ, ನಿಮ್ಮ ಸಹೋದರರು ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಶರಣಾದ ನಕ್ಸಲರಿಗೆ ಸರ್ಕಾರ ರಕ್ಷಣೆ ಒದಗಿಸುತ್ತದೆ ಎಂದು ಶಾ ಭರವಸೆ ನೀಡಿದ್ದಾರೆ.
ಛತ್ತೀಸಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರ ಸರ್ಕಾರ ನಕ್ಸಲಿಸಂ ಮುಕ್ತ ಗ್ರಾಮವೆಂದು ಘೋಷಿಸಿಕೊಳ್ಳುವ ಗ್ರಾಮಗಳ ಅಭಿವೃದ್ಧಿಗಾಗಿ ₹1 ಕೋಟಿ ನೀಡಲಾಗುವುದು ಎಂದು ಈಗಾಗಲೇ ತಿಳಿಸಿದೆ. ಅಭಿವೃದ್ಧಿಗೆ ಶಸ್ತ್ರಾಸ್ತ್ರಗಳು, ಐಇಡಿಗಳು ಮತ್ತು ಗ್ರೆನೇಡ್‌ಗಳ ಅಗತ್ಯವಿಲ್ಲ ಎಂದು ಅರಿತ 521 ನಕ್ಸಲರು ಈ ವರ್ಷದಲ್ಲಿ ಶರಣಾಗಿದ್ದಾರೆ. ಕಳೆದ ವರ್ಷ 881 ಮಂದಿ ಶರಣಾಗತಿ ಆಗಿದ್ದರು ಎಂದು ಶಾ ಹೇಳಿದ್ದಾರೆ.