ಮಂಜೇಶ್ವರ : ಕುಂಜತ್ತೂರಿನಲ್ಲಿ ರಿಕ್ಷಾ ಚಾಲಕ ಶೆರೀಫ್ ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೋಲೀಸರು ಸೆರೆ ಹಿಡಿದಿದ್ದಾರೆ. ಕರ್ನಾಟಕ ನಿವಾಸಿ ಅಭಿಷೇಕ್ ಶೆಟ್ಟಿ ಬಂಧಿತ ಆರೋಪಿ.
ವ್ಯಕ್ತಿ ವೈರಾಗ್ಯವೇ ಕೊಲೆಗೆ ಕಾರಣವೆಂದು ಪೋಲೀಸರಿಗೆ ಲಭಿಸಿದ ಪ್ರಾಥಮಿಕ ಮಾಹಿತಿ. ಕೊಲೆಗೈಯಲು ಸಹಾಯ ಮಾಡಿದವನನ್ನೂ ಈ ಸಂದರ್ಭ ಮಂಜೇಶ್ವರ ಪೋಲೀಸರು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತಿದ್ದಾರೆ. ಅಧಿಕೃತವಾಗಿ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ. ಬಂಧಿತ ಆರೋಪಿ ರಿಕ್ಷಾ ಚಾಲಕನಾಗಿದ್ದು, ಕೊಲೆಗೀಡಾದ ಶೆರೀಫ್ ಹಾಗೂ ಆರೋಪಿ ಅಭಿಷೇಕ್ ಶೆಟ್ಟಿ ಇಬ್ಬರೂ ಸ್ನೇಹಿತರೆಂಬ ಮಾಹಿತಿ ಲಭಿಸಿದೆ. ಕೊಲೆಗೀಡಾದ ಶೆರೀಫ್ ನ ಮೊಬೈಲ್ ಪೋನ್ ಕೊಲೆ ನಡೆದ ಸ್ಥಳದಲ್ಲಿ ಲಭಿಸಿರಲಿಲ್ಲ. ಬಳಿಕ ಸೈಬರ್ ಸೆಲ್ ನ ಸಹಾಯದೊಂದಿಗೆ ಶರೀಫ್ ನಿಗೆ ಬಂದ ಕರೆಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಪೋಲೀಸರಿಗೆ ಆರೋಪಿಯ ಸುಳಿವು ಲಭಿಸಿರುವುದಾಗಿ ತಿಳಿದು ಬಂದಿದೆ.
ಕಳೆದ ಗುರುವಾರ ಸಂಜೆ ಮಂಗಳೂರು ಕೊಲ್ನಾಡು ನಿವಾಸಿ ಶೆರೀಫ್ ನ ಮೃತದೇಹ ಕುಂಜತ್ತೂರಿನ ಅಡ್ಕ ಪದವಿನ ನಿರ್ಜನ ಪ್ರದೇಶವೊಂದರ ಆವರಣ ಗೋಡೆ ಇಲ್ಲದ ಬಾವಿಯಲ್ಲಿ ಪತ್ತೆಯಾಗಿತ್ತು. ಬಾವಿಯ ಸಮೀಪ ಚಪ್ಪಲಿ ಹಾಗೂ ರಕ್ತದ ಕಲೆ ಕಂಡು ಬಂದಿತ್ತು.