ತಿರುವನಂತಪುರ: ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವರ್ತಿಸುತ್ತಿದ್ದಾರೆ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಈ ಸಂಬಂಧ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಂದ್ರಶೇಖರ್, ಸಂವಿಧಾನವನ್ನು ಕೇವಲ ಸುಳ್ಳುಗಳಿಗಾಗಿ ದುರುಪಯೋಗಪಡಿಸಿಕೊಳ್ಳುವ ಬದಲು, ಸಂವಿಧಾನವನ್ನು ಅಧ್ಯಯನ ಮಾಡಲು ಸಲಹೆ ನೀಡಿದ್ದಾರೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಓಲೈಕೆ ರಾಜಕಾರಣಕ್ಕಾಗಿ ಅನೇಕ ತಿದ್ದುಪಡಿ ಮಸೂದೆಗಳನ್ನು ಜಾರಿಗೆ ತಂದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಜನರ ಮತ್ತು ದೇಶದ ಹಿತದೃಷ್ಟಿಯಿಂದ ತಿದ್ದುಪಡಿಗಳನ್ನು ಮಾಡಿದೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯಿಂದಾಗಿ ದೇಶದ ಬಡ ಮುಸ್ಲಿಂ ಸಮುದಾಯದವರಿಗೆ ಅನುಕೂಲವಾಗಲಿದೆ. ಈ ತಿದ್ದುಪಡಿಯಿಂದಾಗಿ ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕತೆಯ ಆಡಳಿತಕ್ಕೆ ಸಹಕಾರಿಯಾಗಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಅಂಗೀಕರಿಸಲಾಗಿದೆ. ಇದು ದೇಶದ ಐತಿಹಾಸಿಕ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು 'ಮುಸ್ಲಿಂ ವಿರೋಧಿ', 'ಅಸಂವಿಧಾನಿಕ ನಡೆ' ಎಂದು ಭಾರಿ ವಿರೋಧ ವ್ಯಕ್ತಪಡಿಸಿವೆ.
ಶನಿವಾರ ತಡರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 'ವಕ್ಫ್ (ತಿದ್ದುಪಡಿ) ಮಸೂದೆ'ಗೆ ಅಂಕಿತ ಹಾಕಿದ್ದಾರೆ.