ಢಾಕಾ: ಅಮೆರಿಕದ ಪ್ರತಿಸುಂಕ ಕ್ರಮದಿಂದ ಪ್ರಮುಖ ಜವಳಿ ಉದ್ಯಮಕ್ಕೆ ಭಾರಿ ಹೊಡೆತ ನೀಡಲಿದೆ ಎಂದು ಬಾಂಗ್ಲಾದೇಶದ ಜವಳಿ ಉದ್ಯಮದ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಶನಿವಾರ ತುರ್ತು ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ತಜ್ಞರು, ಸಲಹೆಗಾರರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಬಾಂಗ್ಲಾದೇಶವು ಶೇ 80ರಷ್ಟು ಜವಳಿ ಮತ್ತು ಸಿದ್ಧ ಉಡುಪುಗಳನ್ನು ರಫ್ತು ಮಾಡುತ್ತದೆ. ಕಳೆದ ವರ್ಷ ಸರ್ಕಾರದ ವಿರುದ್ಧ ನಡೆದ ಗಲಭೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಜವಳಿ ಉದ್ಯಮವು ಇದೀಗ ಮತ್ತೆ ಚೇತರಿಕೆಯತ್ತ ಮುಖ ಮಾಡಿದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಾಂಗ್ಲಾದೇಶದ ಮೇಲೆ ಶೇ 37ರಷ್ಟು ಪ್ರತಿಸುಂಕ ವಿಧಿಸಿದ್ದಾರೆ.
ಬಾಂಗ್ಲಾದೇಶ ಸಿದ್ಧ ಉಡುಪು ಉತ್ಪಾದಕರು ಮತ್ತು ರಫ್ತು ಅಸೋಸಿಯೇಷನ್ (ಬಿಜಿಎಂಇಎ) ಪ್ರಕಾರ ಬಾಂಗ್ಲಾದೇಶವು ವಾರ್ಷಿಕ ₹ 71 ಕೋಟಿ ಮೌಲ್ಯದಷ್ಟು ಜವಳಿಯನ್ನು ರಫ್ತು ಮಾಡುತ್ತದೆ. ಅಮೆರಿಕದ ತೆರಿಗೆ ನೀತಿಯಿಂದ ಬಾಂಗ್ಲಾದೇಶದ ಜವಳಿ ಉದ್ಯಮವು ಸಂಕಷ್ಟಕ್ಕೆ ಸಿಲುಕಲಿದೆ ಎಂಬುದಾಗಿ ವರದಿಗಳು ತಿಳಿಸಿವೆ.