ರಾಮೇಶ್ವರಂ: ತಮಿಳುನಾಡಿನ ರಾಮೇಶ್ವರಂನಲ್ಲಿ ನಿರ್ಮಿಸಿರುವ ಲಂಬವಾಗಿ ತೆರೆಯುವ ಪಂಬನ್ ಲಿಫ್ಟ್ ಸಮುದ್ರ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು.
ಇದೇ ವೇಳೆ ರಾಮೇಶ್ವರಂ-ತಂಬರಂ (ಚೆನ್ನೈ) ರೈಲು ಸೇವೆಗೂ ಚಾಲನೆ ನೀಡಿದರು.
ಪಾಕ್ (Palk) ಜಲಸಂಧಿ ಎಂದೇ ಕರೆಯುವ ಮಂಡಪಂ ಹಾಗೂ ಪಂಬನ್ ರೈಲು ನಿಲ್ದಾಣಗಳ ನಡುವೆ ಈ ವಿಶಿಷ್ಟ ಸೇತುವೆ ನಿರ್ಮಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಗೈರಾಗಿದ್ದರು. ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ, ಈ ವಿಷಯವನ್ನು ಪ್ರಧಾನಮಂತ್ರಿ ಕಚೇರಿಗೂ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಎಂ.ಕೆ ಸ್ಟಾಲಿನ್ ಅವರು ಉದಕಮಂಡಲದಲ್ಲಿ ವಿವಿಧ ಕಾರ್ಯಮಗಳಲ್ಲಿ ಭಾಗವಹಿಸಿದ್ದಾರೆ.
ಪಂಬನ್ ಸೇತುವೆ...
ಸೇತುವೆಯ ಒಟ್ಟು ಉದ್ದ 2.2 ಕಿ.ಮೀ. ಇದೆ. ಇದು ಮಂಡಪಂ ನಗರ ಹಾಗೂ ಪಂಬನ್ ದ್ವೀಪವನ್ನು ಸಂಪರ್ಕಿಸುತ್ತದೆ. ಇದೇ ಮಾರ್ಗದಲ್ಲಿ ಶತಮಾನದ ಹಿಂದೆ ಬ್ರಿಟಿಷರು ನಿರ್ಮಿಸಿದ್ದ ಸೇತುವೆಗೆ ಬದಲಾಗಿ ಈ ನೂತನ ಸೇತುವೆ ನಿರ್ಮಿಸಲಾಗಿದೆ. ಹಳೇ ಸೇತುವೆಗೆ 2022ರಲ್ಲಿ ನಿವೃತ್ತಿ ಘೋಷಿಸಲಾಯಿತು. ರೈಲ್ ವಿಕಾಸ್ ನಿಗಮ ಲಿ. (RVNL) ಇದನ್ನು ನಿರ್ಮಾಣ ಮಾಡಿದೆ.
ರೈಲು ಸಂಚಾರದ ವೇಳೆ ಸೇತುವೆಯಾಗುವ ಹಾಗೂ ಹಡಗು ಸಂಚಾರದ ಸಂದರ್ಭದಲ್ಲಿ ಲಂಬವಾಗಿ ಮೇಲಕ್ಕೇರಿ ದಾರಿ ಮಾಡುವ ಮೂಲಕ ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸೇತುವೆ ಇದಾಗಿದೆ. 17 ಮೀಟರ್ ಎತ್ತರಕ್ಕೆ ತೆರೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಇದನ್ನು ₹ 700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ವಿಶೇಷತೆಗಳು...
* ಸೇತುವೆಯು 72.5 ಮೀ. ಉದ್ದದ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಒಳಗೊಂಡಿದೆ
* ಲಿಫ್ಟ್ ಸ್ಪ್ಯಾನ್ ಅನ್ನು 17 ಮೀ. ಎತ್ತರದವರೆಗೂ ಏರಿಸುವಂತೆ ಸೇತುವೆ ವಿನ್ಯಾಸಗೊಳಿಸಲಾಗಿದೆ.
* ಲಿಫ್ಟ್ ಸ್ಪ್ಯಾನ್ ಮೇಲಕ್ಕೆ ಎತ್ತರಿಸಿ, ಕೆಳಭಾಗದಲ್ಲಿ ಮೀನುಗಾರಿಕೆಯ ಬೃಹತ್ ದೋಣಿಗಳು, ಕರಾವಳಿ ಕಾವಲು ಪಡೆ ಮತ್ತು ಸರಕು ಸಾಗಣೆ ಹಡಗುಗಳು ಸಂಚರಿಸಲು ಅವಕಾಶ ಕಲ್ಪಿಸಲಾಗುತ್ತದೆ.
* ಸೇತುವೆಯ ಬಾಳಿಕೆ ಅವಧಿ 100 ವರ್ಷ ಎಂದು ಅಂದಾಜಿಸಲಾಗಿದೆ