ಬುದೌನ್: ಬಡ ಮತ್ತು ಶೋಷಿತ ಮುಸ್ಲಿಮರ ಹಿತದೃಷ್ಟಿಯಿಂದ ವಕ್ಫ್ (ತಿದ್ದುಪಡಿ) ಮಸೂದೆಯನ್ನು ತರಲಾಗಿದೆ ಎಂದು ಪ್ರತಿಪಾದಿಸಿದ ಕೇಂದ್ರ ಸಚಿವ ಬಿ.ಎಲ್. ವರ್ಮಾ, ಸುಪ್ರೀಂ ಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸುವುದರಿಂದ ಪ್ರಯೋಜನವಾಗದು ಎಂದು ಭಾನುವಾರ ಹೇಳಿದ್ದಾರೆ.
ಮಸೂದೆಗೆ ಸಂಸತ್ತಿನಲ್ಲಿ ಅಗಾಧವಾದ ಬೆಂಬಲ ದೊರೆತಿದೆ. ಅದು ನರೇಂದ್ರ ಮೋದಿ ಸರ್ಕಾರದ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ವರ್ಮಾ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ.
'ವಕ್ಫ್ (ತಿದ್ದುಪಡಿ) ಮಸೂದೆಯನ್ನು ಭಾರಿ ಬಹುಮತದಿಂದ ಅಂಗೀಕರಿಸಲಾಗಿದೆ. ಕೆಲವರು ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಬಹುದು, ಆದರೆ ಏನೂ ಆಗುವುದಿಲ್ಲ' ಎಂದು ಅವರು ಬಿಜೆಪಿ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಸೂದೆಯಿಂದ ಮುಸ್ಲಿಂ ಸಮುದಾಯದ ದುರ್ಬಲ ವರ್ಗಗಳಿಗೆ, ವಿಶೇಷವಾಗಿ ಬಡವರಿಗೆ ಮತ್ತು ಪಾಸ್ಮಾಂಡಾ ಮುಸ್ಲಿಮರಿಗೆ ಪ್ರಯೋಜನವಾಗಲಿದೆ ಎಂದು ವರ್ಮಾ ಒತ್ತಿ ಹೇಳಿದ್ದಾರೆ.
'ಈ ಕಾನೂನು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ಅಂತಿಮವಾಗಿ ಸವಲತ್ತುರಹಿತ ಮುಸ್ಲಿಮರಿಗೆ ಇದು ಉಪಯೋಗ ಆಗಲಿದೆ' ಎಂದು ಹೇಳಿದ್ದಾರೆ.