ನವದೆಹಲಿ: ಬಿಜೆಪಿ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರಿಗೆ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರು ಪಕ್ಷದ ಉತ್ತಮ ಆಡಳಿತ ಕಾರ್ಯಸೂಚಿಯನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, 'ಪಕ್ಷದ ಸ್ಥಾಪನಾ ದಿನದಂದು ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಶುಭಾಶಯ ತಿಳಿಸುತ್ತೇನೆ.
ಕಳೆದ ಹಲವಾರು ದಶಕಗಳಿಂದ ಪಕ್ಷವನ್ನು ಬಲಪಡಿಸಲು ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಎಲ್ಲರನ್ನು ನಾವು ಸ್ಮರಿಸುತ್ತೇವೆ. ಈ ಮಹತ್ವದ ದಿನವು ದೇಶದ ಪ್ರಗತಿಯ ಕಡೆಗೆ ಕೆಲಸ ಮಾಡುವ ಮತ್ತು ವಿಕಸಿತ ಭಾರತದ ಕನಸನ್ನು ನನಸು ಮಾಡುವ ನಮ್ಮ ಅಪ್ರತಿಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ' ಎಂದು ಹೇಳಿದ್ದಾರೆ.
ಉತ್ತಮ ಆಡಳಿತ ನೀಡುವ ನಮ್ಮ ಪಕ್ಷದ ಕಾರ್ಯಸೂಚಿಯನ್ನು ದೇಶದ ಜನ ನೋಡುತ್ತಿದ್ದಾರೆ. ಇದು ಕಳೆದ ವರ್ಷಗಳಲ್ಲಿ ಲೋಕಸಭಾ ಚುನಾವಣೆ, ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು ದೇಶಾದ್ಯಂತ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಾವು ಪಡೆದ ಐತಿಹಾಸಿಕ ಜನಾದೇಶಗಳಲ್ಲಿಯೂ ಅದು ಪ್ರತಿಫಲಿಸಿದೆ ಎಂದು ಅವರು ತಿಳಿಸಿದ್ದಾರೆ.
'ಸಮಾಜಕ್ಕೆ ಸೇವೆ ಸಲ್ಲಿಸುವುದನ್ನು ಮತ್ತು ಸರ್ವತೋಮುಖ ಅಭಿವೃದ್ಧಿಯನ್ನು ನಮ್ಮ ಸರ್ಕಾರ ಮುಂದುವರಿಸುತ್ತದೆ. ಪಕ್ಷದ ಬೆನ್ನೆಲುಬಾಗಿರುವ ಎಲ್ಲಾ ಶ್ರಮಾಶೀಲ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳು. ದೇಶದ ಪ್ರತಿಯೊಂದು ಭಾಗದಲ್ಲೂ ಬಿಜೆಪಿ ಕಾರ್ಯಕರ್ತರು ದಿನದ 24 ಗಂಟೆಯೂ ಕೆಲಸ ಮಾಡುತ್ತಿದ್ದು, ಬಡವರು, ದಲಿತರು ಮತ್ತು ಹಿಂದುಳಿದ ಜನರಿಗೆ ಸೇವೆ ಸಲ್ಲಿಸುತ್ತಿರುವ ರೀತಿ ಹೆಮ್ಮೆಯಾಗುತ್ತದೆ. ಅವರ ಶಕ್ತಿ ಮತ್ತು ಉತ್ಸಾಹ ನಿಜವಾಗಿಯೂ ಪ್ರೇರಣಾದಾಯಕವಾಗಿದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.