ಮಧೂರು : ಸೀಮೆಯ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವೆ ಕಾರ್ಯಕ್ರಮದಲ್ಲಿ ಜಲಸಂರಕ್ಷಣೆ ಕಾರ್ಯವೂ ಸದ್ದಿಲ್ಲದೆ ನಡೆದುಬರುತ್ತಿದೆ.
ದಿನವೊಂದಕ್ಕೆ ಸಾವಿರಾರು ಮಂದಿಗೆ ಅನ್ನದಾಸೋಹ ನಡೆದುಬರುತ್ತಿದ್ದು, ಭಕ್ತಾದಿಗಳಿಗೆ ಕೈತೊಳೆಯುವುದು, ಅಡುಗೆ ಪಾತ್ರೆ ತೊಳೆಯುವುದರಿಂದ ತೊಡಗಿ ನಾನಾ ರೀತಿಯಲ್ಲಿ ಹೊರಚೆಲ್ಲುವ ನೀರನ್ನು ಇಲ್ಲಿ ಪ್ರತ್ಯೇಕವಾಗಿ ದಾಸ್ತಾನಿರಿಸಿ ತೋಟಗಳಿಗೆ ಮರುಬಳಕೆ ಮಾಡಲಾಗುತ್ತಿದೆ. ಆಹಾರ ಸೇವಿಸಿ ಕೈತೊಳೆಯುವ ನೀರನ್ನು ಬೃಹತ್ ಹೊಂಡ ನಿರ್ಮಿಸಿ ಅದಕ್ಕೆ ಟಾರ್ಪಾಲ್ ಅಳವಡಿಸಿ ಸಂಗ್ರಹಿಸಲಾಗುತ್ತದೆ. ಸುಮಾರು ಹತ್ತುಸಾವಿರ ಲೀಟರ್‍ಗೂ ಹೆಚ್ಚುಸಾಮಥ್ರ್ಯದ ಈ ಹೊಂಡದಲ್ಲಿ ನೀರು ತುಂಬುತ್ತಿದ್ದಂತೆ ತೋಟಗಳಿಗೆ ಪಂಪು ಮಾಡಿ ಬಿಡಲಾಗುತ್ತಿದೆ. ನೀರಿನ ಮಿತವಾದ ಬಳಕೆ ಬಗ್ಗೆ ಸೂಚನೆಗಳನ್ನೂ ಭಕ್ತಾದಿಗಳಿಗೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯ ಕಟ್ಟುನಿಟ್ಟಿನ ಸಊಚನೆಗಳಿರುವುದರಿಂದ ಭಕ್ತಾದಿಗಳಿಗೆ ಕುದಿಸಿ ತಣಿಸಿದ ನೀರನ್ನೇ ಪೂರೈಸಲಾಗುತ್ತಿದೆ. ಇದಕ್ಕಾಗಿ ದೇಗುಲದ ಒಳಾಂಗಣದಲ್ಲಿ ಅಲ್ಲಲ್ಲಿ ಗ್ಯಾಸ್ ಅಳವಡಿಸಿ ನೀರನ್ನು ಕುದಿಸಿ ಸ್ವಯಂಸೇವಕರು ನೀರು ಪೂರೈಸುತ್ತಿದ್ದಾರೆ. ಜತೆಗೆ ಮಿನರಲ್ ವಾಟರ್ ಬಟಲಿಗಳನ್ನೂ ಪೂರೈಸಲಗುತ್ತಿದೆ.
ಕುಟುಂಬಶ್ರೀ, ಹಸಿರು ಕ್ರಿಯಾಸೇನೆ, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರ ನಿರಂತರ ಶ್ರಮದಾನದಿಂದ ದೇಗುಲದ ಆಸುಪಾಸು ಸಂಪೂರ್ಣ ಶುಚಿತ್ವವನ್ನೂ ಕಾಯ್ದುಕೊಳ್ಳಲಾಗುತ್ತಿದೆ. ಇದರಿಂದಾಗಿ ದೇವಸ್ಥಾನದ ಒಳಗೆ, ಹೊರಾಂಗಣ ಹಾಗೂ ರಸ್ತೆಗಳಲ್ಲಿ ಶುಚೀಕರಣ ಕಾಯ್ದುಕೊಳ್ಳಲಾಗಿದೆ.