ಬ್ಯಾಂಕಾಕ್: ಮಧ್ಯ ಮ್ಯಾನ್ಮಾರ್‌ನ ಪುಟ್ಟ ನಗರವಾದ ಮೈಕಿಲಾ ಸಮೀಪದಲ್ಲಿ ಇಂದು (ಭಾನುವಾರ) ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಮಾರ್ಚ್ 28ರಂದು ಮ್ಯಾನ್ಮಾರ್‌ನಲ್ಲಿ ಸಂಭವಿಸಿದ್ದ 7.7 ತೀವ್ರತೆಯ ಭೂಕಂಪದಲ್ಲಿ ಅಪಾರ ಪ್ರಮಾಣದ ನಾಶ-ನಷ್ಟ ಉಂಟಾಗಿತ್ತು.
ಪರಿಹಾರ ಕಾರ್ಯಾಚರಣೆ ಪ್ರಗತಿಯಲ್ಲಿರುವಂತೆಯೇ ಮತ್ತೆ ಭೂಮಿ ಕಂಪಿಸಿದೆ. ಆದರೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಮಾರ್ಚ್ 28ರಂದು ಸಂಭವಿಸಿದ್ದ ಭೂಕಂಪದಲ್ಲಿ 3,600 ಅಧಿಕ ಮಂದಿ ಮೃತಪಟ್ಟಿದ್ದು, 5,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ.
ಮ್ಯಾನ್ಮಾರ್‌ನ ಎರಡನೇ ಅತಿ ದೊಡ್ಡ ನಗರವಾದ ಮಂಡಲೆದಿಂದ ದಕ್ಷಿಣಕ್ಕೆ 97 ಕಿ.ಮೀ. ದೂರದಲ್ಲಿರುವ ವುಂಡ್ವಿನ್ ಪಟ್ಟಣ ಪ್ರದೇಶದಲ್ಲಿ 20 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಮ್ಯಾನ್ಮಾರ್‌ನ ಹವಾಮಾನ ಇಲಾಖೆ ತಿಳಿಸಿದೆ.