ದುಬೈ: ಅಮೆರಿಕದ ಜೊತೆ ಹೊಸ ಪರಮಾಣು ಒಪ್ಪಂದಕ್ಕೆ ಒಪ್ಪಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಹಾಗೇನಾದರೂ ದಾಳಿ ನಡೆಸಿದರೆ ಅಮೆರಿಕವು ಬಲವಾದ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಮೇನಿ ಎಚ್ಚರಿಕೆ ನೀಡಿದ್ದಾರೆ.
ಮಾರ್ಚ್ ಆರಂಭದಲ್ಲಿ ಇರಾನ್ ನಾಯಕತ್ವಕ್ಕೆ ಕಳುಹಿಸಲಾದ ಪತ್ರದಲ್ಲಿ ವಿವರಿಸಿರುವಂತೆ ತಮ್ಮ ಪ್ರಸ್ತಾಪವನ್ನು ಇರಾನ್ ಸ್ವೀಕರಿಸದಿದ್ದರೆ ಬಾಂಬ್ ದಾಳಿ ಮಾಡಲಾಗುವುದು ಎಂದು ಟ್ರಂಪ್ ಭಾನುವಾರ ತಮ್ಮ ಬೆದರಿಕೆಯನ್ನು ಪುನರುಚ್ಚರಿಸಿದ್ದಾರೆ. ನಿರ್ಧಾರ ತೆಗೆದುಕೊಳ್ಳಲು ಇರಾನ್‌ಗೆ ಎರಡು ತಿಂಗಳ ಕಾಲಾವಕಾಶ ನೀಡಿದ್ದಾರೆ.
'ಅಮೆರಿಕ ಮತ್ತು ಇಸ್ರೇಲ್ ಜೊತೆ ಶತೃತ್ವ ಸದಾ ಇದೆ. ಅವರು ನಮ್ಮ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ, ಅದು ಸಾಧ್ಯವಿಲ್ಲ ಎಂದು ನಾವು ಭಾವಿಸುತ್ತೇವೆ. ಆದರೆ ಅವರು ಯಾವುದೇ ದುಷ್ಕೃತ್ಯ ಎಸಗಿದರೆ ಬಲವಾದ ಪ್ರತಿದಾಳಿ ಎದುರಿಸುತ್ತಾರೆ'ಎಂದು ಖಮೇನಿ ಎಚ್ಚರಿಕೆ ನೀಡಿದ್ದಾರೆ.
ಹಿಂದಿನಂತೆ ದೇಶದೊಳಗೆ ಅವರು ದೇಶದ್ರೋಹಿ ಕೃತ್ಯಗಳನ್ನು ನಡೆಸುವ ಬಗ್ಗೆ ಯೋಚಿಸುತ್ತಿದ್ದರೆ, ಇರಾನಿನ ಜನರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದೂ ಹೇಳಿದ್ದಾರೆ.
2022-2023ರಲ್ಲಿ ಹಿಜಾಬ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಯುವತಿ ಮಹ್ಸಾ ಅಮಿನಿಯ ಕಸ್ಟಡಿ ಸಾವಿನ ವಿರುದ್ಧ ನಡೆದ ಪ್ರತಿಭಟನೆಗಳು ಮತ್ತು 2019ರಲ್ಲಿ ಇಂಧನ ಬೆಲೆ ಏರಿಕೆಯ ವಿರುದ್ಧ ದೇಶಾದಾದ್ಯಂತ ನಡೆದ ಪ್ರತಿಭಟನೆಗಳು ಸೇರಿದಂತೆ ಇತ್ತೀಚಿನ ಅಶಾಂತಿಗೆ ಇರಾನ್ ಅಧಿಕಾರಿಗಳು ಪಾಶ್ಚಿಮಾತ್ಯರನ್ನು ದೂಷಿಸಿದ್ದಾರೆ.
ಕಳೆದ ವಾರ, ಇರಾನ್ ಅಮೆರಿಕದ ಪತ್ರಕ್ಕೆ ಪ್ರತಿಕ್ರಿಯೆ ಸಲ್ಲಿಸಿತ್ತು. ಈ ಬಗ್ಗೆ ವಿವರಿಸಿರುವ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಇರಾನ್, ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸುವುದಿಲ್ಲ. ಆದರೆ ಖಮೇನಿ ಅವರ ಆಜ್ಞೆಯ ಪ್ರಕಾರ ಪರೋಕ್ಷವಾಗಿ ಮಾತುಕತೆಗಳನ್ನು ಮುಂದುವರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದರು.